ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ಆಯೋಜಿಸಲಾಗಿದ್ದ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಹವಾಮಾನ ವೈಪರೀತ್ಯದಿಂದಾಗಿ ವರ್ಚುಯಲ್ ಮೂಲಕ ಭಾಷಣ ಮಾಡಿದರು.
ಪೂರ್ವ ನಿಗದಿತ ಕಾರ್ಯಕ್ರಮದಂತೆ ಪ್ರಧಾನಿ ಮೋದಿ ಅವರು ದೆಹಲಿಯಿಂದ ಕೋಲ್ಕತ್ತಾಕ್ಕೆ ಆಗಮಿಸಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ ನಾಡಿಯಾದ ತಾಹೇರ್‌ಪುರ ಹೆಲಿಪ್ಯಾಡ್‌ನಲ್ಲಿ ಇಳಿಯಬೇಕಿತ್ತು. ಆದರೆ ತೀವ್ರವಾದ ಮಂಜು ಕವಿದಿದ್ದರಿಂದ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಸಾಧ್ಯವಾಗಲಿಲ್ಲ. ಪೈಲಟ್ ಆಕಾಶದಲ್ಲಿ ಹಲವು ಸುತ್ತುಗಳನ್ನು ಹಾಕಿದರೂ, ದೃಷ್ಟಿಗೋಚರತೆ ಕಡಿಮೆ ಇದ್ದ ಕಾರಣ ಸುರಕ್ಷತೆಯ ದೃಷ್ಟಿಯಿಂದ ಹೆಲಿಕಾಪ್ಟರ್ ಅನ್ನು ಮತ್ತೆ ಕೋಲ್ಕತ್ತಾಕ್ಕೆ ತಿರುಗಿಸಲಾಯಿತು.
ನೇರವಾಗಿ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದಿದ್ದಕ್ಕೆ ಪ್ರಧಾನಿಯವರು ಭಾಷಣದ ಆರಂಭದಲ್ಲೇ ಜನತೆಯ ಕ್ಷಮೆಯಾಚಿಸಿದರು. ನಂತರ ವರ್ಚುಯಲ್ ಮೂಲಕವೇ ರಾಜ್ಯದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಟಿಎಂಸಿ ಸರ್ಕಾರವು ನುಸುಳುಕೋರರನ್ನು ಬೆಂಬಲಿಸುತ್ತಿದೆ. ಈ ಕಾರಣಕ್ಕಾಗಿಯೇ ಅವರು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ವಿರೋಧಿಸುತ್ತಿದ್ದಾರೆ ಎಂದು ಮೋದಿ ಕಿಡಿಕಾರಿದರು.
“ಟಿಎಂಸಿ ನನ್ನನ್ನು ಅಥವಾ ಬಿಜೆಪಿಯನ್ನು ಎಷ್ಟು ಬೇಕಾದರೂ ವಿರೋಧಿಸಲಿ, ಆದರೆ ಆ ರಾಜಕೀಯ ದ್ವೇಷ ಬಂಗಾಳದ ಪ್ರಗತಿಯನ್ನು ಕುಂಠಿತಗೊಳಿಸಬಾರದು” ಎಂದು ಅವರು ಎಚ್ಚರಿಸಿದರು.

