ಕೊಡಗು ಭೂಕಂಪ: ಹೆಲ್ಪ್ ಲೈನ್ ನಂಬರ್ ಬಿಡುಗಡೆಗೊಳಿಸಿದ ವಿಪತ್ತು ನಿರ್ವಹಣಾ ಕೇಂದ್ರ

ಹೊಸದಿಗಂತ ವರದಿ ಮಡಿಕೇರಿ: 

ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೂಕಂಪದ ಕೇಂದ್ರ ಬಿಂದು ಕೊಡಗಿನಲ್ಲೇ ಇರುವುದಾಗಿ ಗೊತ್ತಾಗಿದೆ‌. ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಿಂದ 5.2 ಕಿ.ಮೀ ವಾಯುವ್ಯ ದಿಕ್ಕಿನಲ್ಲಿ ಭೂಮಿಯ 15 ಕಿ.ಮೀ. ಆಳದಲ್ಲಿ ರಿಕ್ಟರ್ ಮಾಪಕ 3.0ರಷ್ಟು ಭೂಕಂಪನವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ‌ ಕೇಂದ್ರ ತಿಳಿಸಿದೆ.

ಈ ಭೂಕಂಪನದಲ್ಲಿ ಯಾರಿಗೂ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಆದರೆ, ಹಲವು ಸೆಕೆಂಡ್’ಗಳಷ್ಟು ಸಮಯ ಕಂಪನದ ಅನುಭವವಾಗಿದೆ. ಸುಮಾರು 50 ಕಿ.ಮೀ ಪ್ರದೇಶದವರೆಗೂ ಅನುಭವವಾಗಿರುವ ಸಾಧ್ಯತೆ ಇದೆ. ಆದರೆ, ಈ ಕಂಪನದಿಂದ ಭಯಪಡುವ ಅಗತ್ಯವಿಲ್ಲ. ಹೆಚ್ಚೆಂದರೆ ಮನೆಯಲ್ಲಿರುವ‌ ವಸ್ತುಗಳು ಅಲುಗಾಡಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಪರಿಣತ ಅನನ್ಯ ವಾಸುದೇವ್, 5 ಸೆಕೆಂಡ್’ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಸಾಕಷ್ಟು ಕಡೆಗಳಿಂದ ಜನರು ಮಾಹಿತಿ ನೀಡಿದ್ದಾರೆ. ವಿಷಯವನ್ನು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಗಮನಕ್ಕೆ ತರಲಾಗಿದೆ‌. ರಿಕ್ಟರ್ ಮಾಪಕದಲ್ಲಿ ದಾಖಲಾಗಿರುವ ದತ್ತಾಂಶಗಳ ಪರಿಶೀಲನೆ ನಡೆದಿದೆ. ಆ ಬಳಿಕ ಕಂಪನದ ತೀವ್ರತೆ ಗೊತ್ತಾಗಲಿದೆ. ಸದ್ಯಕ್ಕೆ ಜನರು ಆತಂಕಪಡುವ ಅಗತ್ಯ ಇಲ್ಲ ಎಂದಿದ್ದಾರೆ.

ಭೂಕಂಪದ ಅನುಭವ ತಮಗೇನಾದರೂ ಆದರೆ ಹಾಗೂ ಭೂಮಿಯಲ್ಲಿ ಬಿರುಕುಗಳು ಕಂಡು ಬಂದರೆ ಕೊಡಗು ಜಿಲ್ಲೆಯ ವಿಪತ್ತು ನಿರ್ವಹಣಾ ಕೇಂದ್ರ 08272-221077, 221099 ಕರೆ ಮಾಡಿ ಮಾಹಿತಿ ಕೊಡಬೇಕೆಂದು ಮನವಿ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!