ಹೊಸದಿಗಂತ ಡಿಜಿಟಲ್ ಡೆಸ್ಕ್;
ಕೇರಳ ಚಿತ್ರರಂಗದಲ್ಲಿ ನ್ಯಾಯಾಧೀಶೆ ಹೇಮಾ ಸಮಿತಿ ವರದಿ ಬಿರುಗಾಳಿ ಎಬ್ಬಿಸಿದ್ದು, ಲೈಂಗಿಕ ಕಿರುಕುಳ ಹಗರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟ್ಟರ್) ನಲ್ಲಿ ನಟಿ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಅವರು ಪ್ರತಿಕ್ರಿಯಿ ನೀಡಿದ್ದಾರೆ.
ಚಿತ್ರರಂಗದಲ್ಲಿ ಮಹಿಳೆಯರು ಲೈಂಗಿಕ ವೇದನೆಗೆ ಗುರಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ನಟಿಖುಷ್ಬೂ ಅಭಿಪ್ರಾಯಪಟ್ಟಿದ್ದಾರೆ.
ಲೈಂಗಿಕ ಕಿರುಕುಳ ಎದುರಿಸುತ್ತಿರುವುದು ವಿಷಾದದ ಸಂಗತಿಯಾಗಿದೆ. ಧೈರ್ಯದಿಂದ ಮುಂದೆ ಬಂದು ತಮಗಾದ ಹಿಂಸೆಯನ್ನು ಹೇಳಿಕೊಂಡ ಮಹಿಳೆಯರನ್ನು ನಾವು ಶ್ಲಾಘಿಸಬೇಕು. ಕಿರುಕುಳವನ್ನು ಹೊರತರುವಲ್ಲಿ ಹೇಮಾ ಸಮಿತಿಯ ವರದಿ ತುಂಬಾ ಉಪಯುಕ್ತವಾಗಿದೆ. ಮಹಿಳೆಯರು ತಮ್ಮ ವೃತ್ತಿಜೀವನದಲ್ಲಿ ಮೇಲೆ ಬರಲು ಯತ್ನಿಸಿದರೆ ಕಿರುಕುಳವನ್ನು ಎದುರಿಸುತ್ತಾರೆ. ಹೀಗಾಗಿ ಸಂತ್ರಸ್ತೆಯರಿಗೆ ನಮ್ಮ ಬೆಂಬಲ ಬೇಕು. ಅವರ ನೋವನ್ನು ಕೇಳಬೇಕು. ಅವರಿಗೆ ಮಾನಸಿಕವಾಗಿ ಧೈರ್ಯ ನೀಡಿಬೇಕು ಎಂದು ಬರೆದಿದ್ದಾರೆ.
ಸಮಸ್ಯೆ ಎದುರಾದಾಗ ಏಕೆ ಮಾತನಾಡಲಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಅಂತಹವರು ಹೊರಗೆ ಬಂದು ಹೇಳುವ ಧೈರ್ಯ ಎಲ್ಲರಿಗೂ ಇರುವುದಿಲ್ಲ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ತನ್ನ ಹೆಂಡತಿ, ಮಕ್ಕಳನ್ನು ಹಿಂಸಿಸುವುದು, ಮಗಳಿಗೆ ಲೈಂಗಿಕ ಕಿರುಕುಳ ನೀಡುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಪರಿಗಣಿಸಿದ ವ್ಯಕ್ತಿಯಿಂದ ನನ್ನ ತಾಯಿ ತನ್ನ ವೈವಾಹಿಕ ಸಂಬಂಧದಲ್ಲಿ ನೋವು ಅನುಭವಿಸಿದರು. ನಾನು ಎಂಟನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರೂ, ನನ್ನ ತಾಯಿಗೆ ಹೇಳಿದರೆ ನಂಬುತ್ತಾರೋ ಇಲ್ಲವೋ ಎಂದು ಹೆದರಿದ್ದೆ. ಏಕೆಂದರೆ ಏನೇ ಆದರೂ ತನ್ನ ಪತಿಯೇ ದೇವರು ಎಂದು ನಂಬುವ ಮನಸ್ಥಿತಿ ಹೊಂದಿದ್ದಳು. ನಾನು 15 ನೇ ವಯಸ್ಸಿನಲ್ಲಿ ಆತನನ್ನು ವಿರೋಧಿಸಲು ಪ್ರಾರಂಭಿಸಿದೆ. 16ನೇ ವಯಸ್ಸಿಗೆ ಬಂದಾಗ ಆತ ನಮ್ಮನ್ನು ಬಿಟ್ಟು ಹೊರಟುಹೋದ. ಬಳಿಕ ನಾವು ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇವೆ ಎಂದು ಖುಷ್ಬೂ ತಾನು ಎದುರಿಸಿದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ.