ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್‌ನ ನಿಯೋಜಿತ ಮುಖ್ಯಮಂತ್ರಿ ಹೇಮಂತ್ ಸೋರೆನ್ ಮತ್ತು ಅವರ ಪತ್ನಿ ಕಲ್ಪನಾ ಸೋರೆನ್ ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು.
ಮುಂದಿನ ದಿನಗಳಲ್ಲಿ ಇನ್ನಷ್ಟು ಸಭೆಗಳು ನಡೆಯಲಿವೆ ಎಂದು ಅಮಿತ್ ಶಾ ಭೇಟಿ ಬಳಿಕ ಹೇಮಂತ್ ಹೇಳಿದ್ದಾರೆ. “ನಿಮ್ಮೆಲ್ಲರಿಗೂ ನಮಸ್ಕಾರಗಳು. ಮುಂದಿನ ದಿನಗಳಲ್ಲಿಯೂ ಸಭೆಗಳು ನಡೆಯುತ್ತವೆ. ಬಹಳಷ್ಟು ವಿಷಯಗಳಿವೆ. ನಾವು ನಮ್ಮ ಸರ್ಕಾರವನ್ನು ರಚಿಸಬೇಕಾಗಿದೆ. ನಾವು ಆಶೀರ್ವಾದಕ್ಕಾಗಿ ಇಲ್ಲಿಗೆ ಬಂದಿದ್ದೇವೆ” ಎಂದು ಹೇಮಂತ್ ಸೊರೆನ್ ತಿಳಿಸಿದ್ದಾರೆ.
ಜೆಎಂಎಂ ನೇತೃತ್ವದ ಮೈತ್ರಿಕೂಟವು ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿದ ನಂತರ ಹೇಮಂತ್ ಸೊರೆನ್ ನವೆಂಬರ್ 28 ರಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜಾರ್ಖಂಡ್‌ನಲ್ಲಿ ಇದೇ ಮೊದಲ ಬಾರಿಗೆ ಅಧಿಕಾರದಲ್ಲಿ ಐದು ವರ್ಷಗಳನ್ನು ಪೂರೈಸಿದ ಪ್ರಸ್ತುತ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದಿದೆ.
ಹೇಮಂತ್ ಸೋರೆನ್ ಅವರು ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ರಾಜ್ಯಪಾಲ ಸಂತೋಷ್ ಗಂಗ್ವಾರ್ ಅವರಿಗೆ ಸಲ್ಲಿಸಿದ್ದಾರೆ ಮತ್ತು ರಾಜಭವನದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ.
81 ಸದಸ್ಯರ ಜಾರ್ಖಂಡ್ ವಿಧಾನಸಭೆಯಲ್ಲಿ ಹೇಮಂತ್ ನೇತೃತ್ವದ ಜೆಎಂಎಂ 56 ಸ್ಥಾನಗಳೊಂದಿಗೆ I.N.D.I.A ಬಣವನ್ನು ಗೆಲುವಿನತ್ತ ಮುನ್ನಡೆಸಿತು.