ಹೊಸದಿಗಂತ ಡಿಜಿಲ್ ಡೆಸ್ಕ್:
ನಿವೃತ್ತ ಬ್ಯಾಂಕ್ ಅಧಿಕಾರಿಯೊಬ್ಬರಿಗೆ ಸೈಬರ್ ಕಳ್ಳರು ಬರೋಬ್ಬರಿ 22 ಲಕ್ಷ ರೂ. ವಂಚಿಸಿರುವ ಆಘಾತಕಾರಿ ಪ್ರಕರಣ ಕರಾವಳಿಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸ್ ಇಲಾಖೆ ಎಷ್ಟೇ ಎಚ್ಚರಿಕೆ ನೀಡುತ್ತಿದ್ದರೂ, ಹೈಟೆಕ್ ಖದೀಮರು ಹೊಸ ಹೊಸ ತಂತ್ರಗಳ ಮೂಲಕ ಜನರನ್ನು ಲೂಟಿ ಮಾಡುತ್ತಲೇ ಇದ್ದಾರೆ.
ಮುಂಬೈ ಪೊಲೀಸ್ ಸೋಗಿನಲ್ಲಿ ವಾಟ್ಸಾಪ್ ಕರೆ!
ಉಡುಪಿಯ 76 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿಗೆ ಜುಲೈ 10 ರಂದು ಅಪರಿಚಿತ ನಂಬರ್‌ನಿಂದ ವಾಟ್ಸಾಪ್ ವಿಡಿಯೋ ಕಾಲ್ ಬಂದಿತ್ತು. ಕರೆ ಮಾಡಿದ ವ್ಯಕ್ತಿ ಪೊಲೀಸ್ ಯೂನಿಫಾರ್ಮ್ ಧರಿಸಿದ್ದು, ತಾನು ಮುಂಬೈನ ಕೊಲಾಬಾ ಸೈಬರ್ ವಿಭಾಗದ ಆಫೀಸರ್ ಎಂದು ಪರಿಚಯಿಸಿಕೊಂಡಿದ್ದ. “ನಿಮ್ಮ ಹೆಸರಿನಲ್ಲಿ ಮುಂಬೈನಲ್ಲಿರುವ ಬ್ಯಾಂಕ್ ಖಾತೆಯಿಂದ ನೂರಾರು ಕೋಟಿ ಅಕ್ರಮ ಹಣ ವರ್ಗಾವಣೆಯಾಗಿದೆ. ನಿಮ್ಮ ಮೇಲೆ ದೊಡ್ಡ ಕೇಸ್ ದಾಖಲಾಗಿದೆ” ಎಂದು ಹೇಳಿ ವೃದ್ಧನಲ್ಲಿ ತೀವ್ರ ಆತಂಕ ಮೂಡಿಸಿದ್ದ.
ಎಡಿಜಿಪಿ, ಇಡಿ ಅಧಿಕಾರಿಗಳ ಹೆಸರಲ್ಲಿ 6 ದಿನಗಳ ಕಾಲ ಹೆದರಿಸಿದ ಜಾಲ!
ಜುಲೈ 11 ರಿಂದ 16 ರವರೆಗೆ ಸೈಬರ್ ಗ್ಯಾಂಗ್ ವೃದ್ಧನನ್ನು ತೀವ್ರ ಮಾನಸಿಕ ಒತ್ತಡದಲ್ಲಿ ಇಟ್ಟಿತ್ತು. ತಾವು ಇಡಿ ಅಧಿಕಾರಿ ಅನಿಲ್ ಕುಮಾರ್ ಮತ್ತು ಎಡಿಜಿಪಿ ವಿಶ್ವಾಸ್ ಎಂದು ಹೇಳಿಕೊಂಡು ಸರಣಿ ಕರೆಗಳನ್ನು ಮಾಡಿದ್ದರು. “ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಲೀಗಲ್ ಆಗಿದೆಯೇ ಎಂದು ಆರ್ ಬಿಐ ತಪಾಸಣೆ ಮಾಡಬೇಕಿದೆ. ಹಾಗಾಗಿ ನಾವು ನೀಡುವ ಸೆಕ್ಯೂರ್ ಖಾತೆಗೆ ತಕ್ಷಣ ಆರ್‌ಟಿಜಿಎಸ್ (RTGS) ಮೂಲಕ ಹಣ ಕಳುಹಿಸಿ, ಪರಿಶೀಲನೆ ಮುಗಿದ ತಕ್ಷಣ ವಾಪಸ್ ಮಾಡಲಾಗುವುದು” ಎಂದು ನಂಬಿಸಿದ್ದರು. ಇದನ್ನು ನೈಜ ತನಿಖೆ ಎಂದೇ ಭಾವಿಸಿದ ನಿವೃತ್ತ ನೌಕರರು ಹಂತ-ಹಂತವಾಗಿ ಒಟ್ಟು 22 ಲಕ್ಷ ರೂ.ಗಳನ್ನು ವಂಚಕರ ಖಾತೆಗೆ ಜಮಾ ಮಾಡಿದ್ದರು.
ಇದನ್ನೂ ಓದಿ:
ಎಫ್‌ಐಆರ್ ದಾಖಲು
ಹಣ ತಲುಪಿದ ನಂತರ ವಂಚಕರ ಫೋನ್ ನಂಬರ್‌ಗಳು ಸಂಪರ್ಕಕ್ಕೆ ಸಿಗದಿದ್ದಾಗ ತಾನು ಮೋಸ ಹೋಗಿರುವುದು ವೃದ್ಧನಿಗೆ ಅರಿವಾಗಿದೆ. ತಕ್ಷಣವೇ ಉಡುಪಿಯ ಸಿಇಎನ್ (CEN) ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(D) ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.



