- ಮೇಘನಾ ಶೆಟ್ಟಿ, ಶಿವಮೊಗ್ಗ
ರಸ್ತೆ ಬದಿ ಆಹಾರಕ್ಕಿರೋ ರುಚಿ ಯಾವ ರೆಸ್ಟೋರೆಂಟ್‌ಗೂ ಇಲ್ಲ, ಏನಂತೀರಿ? ಹಾಗೆ ರಸ್ತೆಬದಿ ಅಂಗಡಿಗಳ ಬಳಿ ಸಂಗ್ರಹ ಆಗುವ ಪ್ಲಾಸ್ಟಿಕ್ ವೇಸ್ಟ್‌ಗೂ ಲೆಕ್ಕವೇ ಇಲ್ಲ.
ಗೋಲ್‌ಗಪ್ಪ, ಪಾನಿಪುರಿ, ಗೋಬಿ, ವಡಾಪಾವ್,ಮೋಮೋಸ್ ಇನ್ನೂ ಎಷ್ಟು ಅಂತ ಹೇಳೋಣ, ರಸ್ತೆ ಬದಿಯಲ್ಲಿ ನಿಂತು ಈ ಯಾವ ಆಹಾರ ತಿಂದರೂ ಅವರು ಕೊಡೋದು ಪ್ಲಾಸ್ಟಿಕ್ ತಟ್ಟೆ, ಚಮಚ ಹಾಗೂ ಬೌಲ್. ಇದನ್ನು ನಾವು ತಿಂದು ಅಲ್ಲೇ ಪಕ್ಕದಲ್ಲಿ ಪುಟ್ಟದಾಗಿರೋ ಡಬ್ಬಿಗೆ ಹಾಕ್ತೀವಿ. ಡಬ್ಬಿ ತುಂಬಿ ನೆಲಕ್ಕೆ ಕಸ ಬಿದ್ದಿದ್ದರೂ ನಾವೇನು ತಲೆ ಕೆಡಿಸಿಕೊಳ್ಳೋದಿಲ್ಲ.
ಭಾರತದಲ್ಲಿ ಪ್ರತಿದಿನ 25,940 ಟನ್‌ನಷ್ಟು ಪ್ಲಾಸ್ಟಿಕ್ ವೇಸ್ಟ್ ಇಕ್ಕಟ್ಟೆಯಾಗುತ್ತದೆ. ಶೇ.40ರಷ್ಟು ಆಹಾರ ವೇಸ್ಟ್ ಆಗುತ್ತದೆ. ದಿನಕ್ಕೆ ಶೇ. 40ರಷ್ಟು ಆಹಾರ ತ್ಯಾಜ್ಯ ಅಂದರೆ ವರ್ಷಕ್ಕೆ 6.7 ಕೋಟಿ ಟನ್.
ಇಂಥ ಸ್ಥಿತಿ ಇರುವಾಗ ಇಲ್ಲೊಬ್ಬರು ನಾವು ಯಾವ ಪ್ಲಾಸ್ಟಿಕ್ ಬಳಸದೇ ಜ್ಯೂಸ್ ಸೆಂಟರ್ ಮಾಡಿದ್ದೀವಿ ಅಂತಿದ್ದಾರೆ. ಪ್ಲಾಸ್ಟಿಕ್ ಬಳಸ್ತಿಲ್ಲ ಎಂದರೆ ಗಾಜಿನ ಲೋಟ ಬಳಸಬಹುದು ಅಂತ ನೀವು ಅನ್ಕೋಬಹುದು. ಆದರೆ ಇವರು ಹಣ್ಣಿನ ರಸ ನೀಡೋದಕ್ಕೆ ಹಣ್ಣುಗಳನ್ನೇ ಬಳಸ್ತಾರೆ.
ಈ ಐಡಿಯಾ ಇರುವ ಸ್ಟ್ರೀಟ್ ಹೊಟೇಲ್ ಇರೋದು ಎಲ್ಲೋ ಅಲ್ಲ, ಇಲ್ಲೆ ನಮ್ಮ ಬೆಂಗಳೂರಿನ ಮಲ್ಲೇಶ್ವರಂನಲ್ಲಿ. ಆನಂದ್ ರಾಜ್ ಅವರ ‘ಈಟ್ ರಾಜಾ’ ಹೆಸರು ಕೇಳಿದ್ದೀರಾ? ಈಟ್ ರಾಜಾದಲ್ಲಿ ನಿಮಗೆ ತಾಜಾ ಹಣ್ಣಿನ ರಸ, ತಾಜಾ ಹಣ್ಣಿನ ಜೊತೆಯೇ ಸಿಗಲಿದೆ. ಏನನ್ನೂ ಬಿಸಾಡದೇ, ಎಲ್ಲವನ್ನೂ ತಿನ್ನಬಹುದು. ಅಂದರೆ ಹಣ್ಣಿನ ರಸ ಕುಡಿದು, ಅದನ್ನು ಹಾಕಿದ ಲೋಟ ಕೂಡ ತಿನ್ನಬಹುದು, ಒಟ್ಟಾರೆ ಕೊಟ್ಟ ಹಣಕ್ಕೆ ಮೋಸ ಇಲ್ಲ ಅನ್ನಿ!
ಜ್ಯೂಸ್ ರಾಜಾದಲ್ಲಿ ನೀವು ಹಣ್ಣಿನ ಜ್ಯೂಸ್ ಆರ್ಡರ್ ಮಾಡಿದ್ರೆ, ಹಣ್ಣಿನ ಒಳಗೇ ಜ್ಯೂಸ್ ಹಾಕಿ ಕೊಡಲಾಗತ್ತದೆ. ಇಲ್ಲಿ ಸ್ಟ್ರಾ ಕೂಡ ಇಲ್ಲ. ಉದಾಹರಣೆಗೆ ಈಗ ಅನಾನಸ್ ಜ್ಯೂಸ್ ಹೇಳಿದ್ರೆ ಅನಾನಸ್‌ನ ಪಲ್ಪ್ ತೆಗೆದ ಖಾಲಿ ಅನಾನಸ್ ಒಳಗೆ ಜ್ಯೂಸ್ ಹಾಕಿ ಕೊಡ್ತಾರೆ.
ಐಡಿಯಾ ಹೇಗೆ ಸಾರ್?
ಇದಕ್ಕೆ ಇಸ್ಪಿರೇಷನ್ ಬೇರೆ ಏನೂ ಅಲ್ಲ, ನಮ್ಮ ಬೆಂಗಳೂರಿನ ಕಸ ಅಂತಾರೆ ಆನಂದ್ ರಾಜ್. ಕಸವೇ ಇಲ್ಲದೆ, ಝೀರೋ ವೇಸ್ಟ್‌ನಲ್ಲಿ ಏನಾದರೂ ಮಾಡೋಕೆ ಸಾಧ್ಯವಾ ಎಂದು ಯೋಚಿಸುವಾಗ ಈ ಐಡಿಯಾ ಬಂತು ಅಂತಾರೆ ಆನಂದ್.
ಆರ್‌ಜೆ ರಾಜ್
ಇದಕ್ಕೂ ಮುಂಚೆ ಎಷ್ಟೋ ವರ್ಷಗಳು ಆನಂದ್ ಆರ್‌ಜೆ ಆಗಿ ಕೆಲಸ ಮಾಡಿದ್ದಾರೆ. ತಂದೆಯ ನಿಧನದ ನಂತರ ಅವರ ಅಂಗಡಿಗೆ ಈ ರೀತಿ ಮಾರ್ಡರ್ನ್ ಟಚ್ ನೀಡಿದ್ದೇನೆ. 99 ಕ್ಕೂ ಹೆಚ್ಚು ವೆರೈಟಿಯ ಜ್ಯೂಸ್ ಮಾಡುತ್ತೇವೆ. ಝೀರೋ ವೇಸ್ಟ್ ಜ್ಯೂಸ್ ಸೆಂಟರ್ ನಮ್ಮದು ಎಂದು ಹೇಳೋಕೆ ಹೆಮ್ಮೆ ಅಂತಾರೆ ಆನಂದ್.
ತಿನ್ನಲಾಗದ ಹಣ್ಣಿನ ಸಿಪ್ಪೆ ಏನು ಮಾಡ್ತಾರೆ?
ಹೌದು, ಕಲ್ಲಂಗಡಿ,ಬಾಳೆಹಣ್ಣು, ಪೈನಾಪಲ್ ಇವುಗಳಲ್ಲಿ ಜ್ಯೂಸ್ ಏನೋ ಕುಡಿಯಬಹುದು. ಆದರೆ ಸಿಪ್ಪೆ ತಿನ್ನೋಕಾಗಲ್ಲ. ಇದನ್ನೆಲ್ಲಾ ಒಂದೆಡೆಗೆ ಶೇಖರಣೆ ಮಾಡಿ, ಹಸುಗಳಿಗೆ ನೀಡುತ್ತಾರೆ. ಕೆಲವು ಹಸುಗಳಿಗೆ ನೀಡಿದ್ರೆ ಇನ್ನೂ ಕೆಲವನ್ನ ಬಯೋ ಎನ್‌ಝೈಮ್ಸ್ ಆಗಿ ಮಾರ್ಪಾಡು ಮಾಡಲಾಗುತ್ತದೆ. ಇದು ನ್ಯಾಚುರಲ್ ಆರ್ಗಾನಿಕ್ ಮಲ್ಟಿಪರ್ಪಸ್ ಕ್ಲೀನರ‍್ಸ್ ಆಗಿದೆ. ಇದರಿಂದ ಮನೆ ಕೂಡ ಸ್ವಚ್ಛ ಮಾಡಬಹುದು.
ನೀರು ಉಳಿತಾಯ
ಗಾಜಿನ ಲೋಟಗಳನ್ನು ಇಟ್ಟಿದ್ದರೆ ಅದನ್ನು ತೊಳೆಯೋದಕ್ಕೆ ಹೆಚ್ಚು ನೀರು ಬೇಕು, ಈಗ ಕಾಲು ಲೀಟರ್‌ನ ಒಂದು ಲೋಟ ತೊಳೆಯಬೇಕು ಎಂದರೆ ಅರ್ಧ ಲೀಟರ್ ನೀರು ಬೇಕೇ ಬೇಕಿದೆ. ಅದೆಲ್ಲವೂ ಇಲ್ಲಿ ಉಳಿತಾಯವಾಗಲಿದೆ. ದಿನಕ್ಕೆ 300 ಜನರಿಗೆ ಜ್ಯೂಸ್ ನೀಡಿದರೆ, 300 ಲೋಟ ತೊಳೆಯಬೇಕಿತ್ತು. ಅಂದರೆ ಒಂದು ಗ್ಲಾಸ್‌ಗೆ ಅರ್ಧ ಲೀಟರ್ ನೀರು. ದಿನಕ್ಕೆ 150 ಲೀಟರ್ ನೀರು ಇಲ್ಲಿ ಸೇವ್ ಆಗುತ್ತದೆ. ಅಂದರೆ ವರ್ಷಕ್ಕೆ
ವರ್ಷಕ್ಕೆ 45,750 ಲೀಟರ್ ನೀರು ಉಳಿತಾಯ.
99 ವೆರೈಟಿ
ಬರೀ ಜ್ಯೂಸ್ ನೀಡುವ ಗ್ಲಾಸ್‌ಗಳಷ್ಟೇ ಅಲ್ಲ, ಇಲ್ಲಿನ ಜ್ಯೂಸ್‌ಗಳು ಕೂಡ ಯೂನಿಕ್ ಆಗಿವೆ. ಒಟ್ಟಾರೆ 99 ವೆರೈಟಿ ಜ್ಯೂಸ್‌ಗಳು ಇಲ್ಲಿ ಸಿಗುತ್ತವೆ.
ಯೋಚಿಸಿ, ಒಂದು ಅಂಗಡಿಯಿಂದ ಇಷ್ಟೊಂದು ವೇಸ್ಟೇಜ್ ಕಡಿಮೆ, ನೀರು ಉಳಿತಾಯ ಆದರೆ, ಭಾರತದ ಎಲ್ಲ ಅಂಗಡಿಗಳಲ್ಲೂ ಇದೇ ರೀತಿ ಕ್ರಿಯೇಟಿವ್ ಐಡಿಯಾಗಳನ್ನು ಬಳಸಿದರೆ ಎಷ್ಟು ವೇಸ್ಟ್ ಕಡಿಮೆ ಆಗಬಹುದು ಅಲ್ವಾ?