August 18, 2026
Tuesday, August 18, 2026
spot_img

ಡಯಾಬಿಟಿಸ್ ನಿಯಂತ್ರಣಕ್ಕೆ ಇಲ್ಲಿದೆ ಡಯಟ್ ಪ್ಲ್ಯಾನ್: ಬೆಳಗಿನಿಂದ ರಾತ್ರಿಯವರೆಗಿನ ಆಹಾರ ಕ್ರಮ ಹೀಗಿರಲಿ

ಇಂದಿನ ಬದಲಾದ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ ಸಕ್ಕರೆ ಕಾಯಿಲೆ ಸಾಮಾನ್ಯ ಸಮಸ್ಯೆಯಾಗಿದೆ. ಡಯಾಬಿಟಿಸ್ ಬಂದ ತಕ್ಷಣ ಗಾಬರಿಪಡುವ ಅಗತ್ಯವಿಲ್ಲ. ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಲಭವಾಗಿ ನಿಯಂತ್ರಣದಲ್ಲಿಡಬಹುದು. ಮಧುಮೇಹಿಗಳು ತಮ್ಮ ದಿನದ ಆರಂಭದಿಂದ ರಾತ್ರಿಯ ಊಟದವರೆಗೆ ಯಾವ ಸಮಯದಲ್ಲಿ, ಎಂತಹ ಆಹಾರಗಳನ್ನು ಸೇವಿಸಬೇಕು ಎಂಬ ಆರೋಗ್ಯಕರ ಡಯಟ್ ಪ್ಲ್ಯಾನ್ ಬಗ್ಗೆ ತಿಳಿಯೋಣ.

ಮುಂಜಾನೆಯ ಆರಂಭ ಹೀಗಿರಲಿ

ದಿನದ ಆರಂಭವು ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡಬೇಕು. ರಾತ್ರಿ ಒಂದು ಚಮಚ ಮೆಂತ್ಯ ಕಾಳುಗಳನ್ನು ನೀರಿನಲ್ಲಿ ನೆನೆಸಿಟ್ಟು, ಮುಂಜಾನೆ ಆ ನೀರನ್ನು ಕುಡಿಯುವುದು ಮತ್ತು ಮೆಂತ್ಯ ಕಾಳುಗಳನ್ನು ಅಗಿದು ತಿನ್ನುವುದು ತುಂಬಾ ಒಳ್ಳೆಯದು. ಅದೇ ರೀತಿ ಸಕ್ಕರೆ ಇಲ್ಲದ ಕಷಾಯ ಅಥವಾ ಸ್ವಲ್ಪ ದಾಲ್ಚಿನ್ನಿ ಹಾಕಿದ ಬಿಸಿ ನೀರು ಕುಡಿಯಬಹುದು.

ಬೆಳಗಿನ ಉಪಾಹಾಕ್ಕೆ ಇದೆ ಬೆಸ್ಟ್

ಬೆಳಗಿನ ತಿಂಡಿ ಪೌಷ್ಟಿಕಾಂಶ ಮತ್ತು ನಾರಿನಂಶದಿಂದ ಕೂಡಿರಬೇಕು. ಬಿಳಿ ಅಕ್ಕಿಯ ತಿಂಡಿಗಳನ್ನು ತಪ್ಪಿಸಿ. ರಾಗಿ ರೊಟ್ಟಿ, ಓಟ್ಸ್ ಉಪ್ಪಿಟ್ಟು, ಗೋಧಿ ರವೆ ಉಪ್ಪಿಟ್ಟು, ಅಥವಾ ಹೆಸರುಬೇಳೆಯ ದೋಸೆ ಅತ್ಯುತ್ತಮ ಆಯ್ಕೆ. ತಿಂಡಿಯ ಜೊತೆಗೆ 4 ನೆನೆಸಿದ ಬಾದಾಮಿ ಮತ್ತು 1 ವಾಲ್‌ನಟ್ ಸೇವಿಸುವುದು ಒಳ್ಳೆಯದು.

ಮಧ್ಯಾಹ್ನದ ಮುನ್ನ ಇದನ್ನು ಸೇವಿಸಿ

ಹಸಿವಾದರೆ ರಕ್ತದ ಸಕ್ಕರೆ ತಕ್ಷಣ ಏರದಂತಹ ಲಘು ಆಹಾರ ಸೇವಿಸಬೇಕು. ಒಂದು ಲೋಟ ತಿಳಿ ಮಜ್ಜಿಗೆಅಥವಾ ಸೌತೆಕಾಯಿ ಸಲಾಡ್, ಹಣ್ಣು ತಿನ್ನುವುದಾದರೆ ಸಣ್ಣ ಸೇಬು ಅಥವಾ ಪೇರಲ ಹಣ್ಣು ತಿನ್ನಬಹುದು.

ಮಧ್ಯಾಹ್ನದ ಊಟ ಹೇಗಿರಬೇಕು

ಊಟದಲ್ಲಿ ಕಾರ್ಬೋಹೈಡ್ರೇಟ್ಸ್ ಕಡಿಮೆ ಇರಬೇಕು ಮತ್ತು ತರಕಾರಿಗಳು ಹೆಚ್ಚಿರಬೇಕು. ಊಟದ ತಟ್ಟೆಯ ಅರ್ಧ ಭಾಗ ತರಕಾರಿ ಸಲಾಡ್ ಅಥವಾ ಪಲ್ಯದಿಂದ ಕೂಡಿರಲಿ. ಬಿಳಿ ಅನ್ನದ ಬದಲು ಮಲ್ಟಿಗ್ರೇನ್ ಚಪಾತಿ, ರಾಗಿ ಮುದ್ದೆ ಅಥವಾ ನವಣೆ/ಸಾಮೆ ಸಿರಿಧಾನ್ಯದ ಅನ್ನ ಬಳಸಿ. ಇದರೊಂದಿಗೆ ಒಂದು ಬಟ್ಟಲು ಬೇಳೆ ಸಾರು ಮತ್ತು ಮೊಸರು ಇರಲಿ.

ಸಂಜೆಯ ಸ್ನ್ಯಾಕ್ಸ್‌ಗೆ ಇದನ್ನು ತಿನ್ನಿ

ಸಂಜೆಯ ಸಮಯದಲ್ಲಿ ಸಕ್ಕರೆ ಕಾಯಿಲೆ ಇರುವವರಿಗೆ ಹಸಿವು ಹೆಚ್ಚಿರುತ್ತದೆ. ಬೇಕರಿ ತಿಂಡಿಗಳನ್ನು ಮುಟ್ಟಬಾರದು. ಬದಲಿಗೆ ಸಕ್ಕರೆ ಇಲ್ಲದ ಹಸಿರು ಚಹಾ ಜತೆಗೆ ಹುರಿದ ಕಡಲೆಕಾಯಿ ಬೀಜ, ಒಣಗಿದ ಚುರುಮುರಿ ಅಥವಾ ಬೇಯಿಸಿದ ಹೆಸರುಕಾಳು ಸಾಲಡ್ ತಿನ್ನಬಹುದು.

ರಾತ್ರಿಯ ಊಟ ಹಗುರವಾಗಿರಬೇಕು

ರಾತ್ರಿಯ ಊಟ ಯಾವಾಗಲೂ ಹಗುರವಾಗಿರಬೇಕು ಮತ್ತು ಮಲಗುವ ಕನಿಷ್ಠ 2 ಗಂಟೆ ಮುಂಚಿತವಾಗಿರಬೇಕು. ಜೋಳದ ರೊಟ್ಟಿ ಜತೆಗೆ ಹಸಿರು ಸೊಪ್ಪಿನ ಪಲ್ಯ ಅಥವಾ ತರಕಾರಿ ಸೂಪ್ ಮತ್ತು ಗೋಧಿ ರವೆ ಉಪ್ಮಾ. ರಾತ್ರಿ ವೇಳೆ ಅನ್ನ ತಿನ್ನುವುದನ್ನು ಸಂಪೂರ್ಣವಾಗಿ ಬಿಡುವುದು ಒಳಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !