ಅವನಿಗೆ ದೇವರು ಅಂದ್ರೆ ಎಲ್ಲಿಲ್ಲದ ಭಕ್ತಿ. ಕೆಟ್ಟ ಕೆಲಸ ಮಾಡಿ ದುಡ್ಡು ಮಾಡುವ ಆಸೆ ಇಲ್ಲ, ಆದರೆ ದುಡ್ಡು ಮಾಡಿ ಶ್ರೀಮಂತನಾಗಬೇಕು ಅನ್ನೋ ಹುಚ್ಚು. ಹಗಲು ರಾತ್ರಿ ನೋಡದೇ ಕೆಲಸ ಮಾಡುತ್ತಿದ್ದ.
ಬಂಗಾರ ಅಂದರೂ ತುಂಬಾನೇ ಇಷ್ಟ. ತನ್ನ ಹೆಂಡತಿ ಮಕ್ಕಳು ಮನೆಯಲ್ಲೂ ಬಂಗಾರದ ಒಡವೆಗಳನ್ನು ಹಾಕಿಕೊಂಡು ಬೀಗಬೇಕು ಅನ್ನೋದು ಅವನ ಆಸೆ ಆಗಿತ್ತು. ಅಂದು ಅವನು ಮಲಗಿದಾಗ ಅವನ ಕನಸ್ಸಿನಲ್ಲಿ ದೇವರು ಬಂದ.
ನಿನಗೇನು ವರ ಬೇಕು ಎಂದು ಕೇಳಿದ. ಕನಸ್ಸಿನಲ್ಲೂ ಈತ ನಾನು ಮುಟ್ಟಿದ್ದೆಲ್ಲ ಚಿನ್ನ ಆಗಲಿ ಎಂದು ಕೇಳಿದ. ಅದಕ್ಕೆ ದೇವರು ತಕ್ಷಣ ತಥಾಸ್ತು ಅನ್ನಲಿಲ್ಲ. ಇದು ವರ ಅಲ್ಲ, ಬೇರೆ ಏನಾದರೂ ಕೇಳು ಅಂದರು. ಅದಕ್ಕೆ ಹಠ ಮಾಡಿ, ಇಲ್ಲ ನನಗೆ ಇದೇ ವರ ಬೇಕು ಎಂದ. ದೇವರು ಒಪ್ಪಿ ತಥಾಸ್ತು ಎಂದ.
ಬೆಳಗ್ಗೆ ಎದ್ದಾಗ ಬಿದ್ದ ಕನಸ್ಸನ್ನು ನೆನೆದು ಈತ ಖುಷಿಯಾಗಿದ್ದ. ಹಾಸಿಗೆಯಲ್ಲ ಹೊಳಪು, ಚಿನ್ನದ್ದು, ಪಕ್ಕದಲ್ಲೇ ಇದ್ದ ಫೋನ್ ಮುಟ್ಟಿದ ಅದೂ ಚಿನ್ನದ ಫೋನ್ ಆಗಿಬಿಡ್ತು. ಅದು ಬರೀ ಕನಸಲ್ಲ, ನಿಜವೇ ಎಂದು ಖುಷಿಯಾಗಿ ಮನೆಯ ಎಲ್ಲ ಸಮಾಗ್ರಿಗಳನ್ನು ಒಂದೊಂದಾಗಿ ಮುಟ್ಟುತ್ತಾ ಬಂದ.
ಅರ್ಧ ವಸ್ತು ಮುಟ್ಟುವ ಹೊತ್ತಿಗೆ ಸುಸ್ತಾಯ್ತು, ಜೋರು ಹಸಿವಾಯ್ತು. ಊಟಕ್ಕೆಂದು ಅನ್ನಕ್ಕೆ ಕೈ ಹಾಕಿದ. ಅನ್ನ ಚಿನ್ನವಾಯ್ತು. ಇದು ಚಿಂತೆಗೆ ಕಾರಣವಾಯ್ತು, ವರ ಅಷ್ಟೇನೂ ಚೆನ್ನಾಗಿಲ್ಲ ಅನಿಸೋಕೆ ಶುರುವಾಯ್ತು. ಮಗಳಿಗೆ ಇದೇನೂ ಗೊತ್ತಿರಲಿಲ್ಲ. ರೂಂನಿಂದ ಬಂದು ನೋಡಿದಾಗ ತಂದೆ ಕಣ್ಣೀರು ಕಂಡ ಅಪ್ಪಾ ಎಂದು ತಬ್ಬಿದಳು. ಮಗಳೂ ಚಿನ್ನದ ಗೊಂಬೆಯಾದಳು!
ಈ ಕಥೆ ನಿಮಗೆ ಚೆನ್ನಾಗಿಯೇ ಗೊತ್ತಿರಬಹುದು. ದುರಾಸೆ ಒಳ್ಳೆಯದಲ್ಲ. ಈ ವರದ ಬದಲು ಸುಖ ಶಾಂತಿ ನೆಮ್ಮದಿ, ಕೆಲಸ ಇಂಥವುಗಳನ್ನು ಕೇಳಿದರೆ ಆತ ಖಂಡಿತಾ ಸುಖವಾಗಿ ಇರುತ್ತಿದ್ದ.