ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಿಕ್ಷುಕರು ಕಣ್ಣ ಮುಂದೆ ಬಂದ್ರೆ ಸಾಕು ಅವರನ್ನು ಗದರಿಸಿ ಓಡಿಸುವವರೇ ಹೆಚ್ಚು. ಅಂತಹದ್ರಲ್ಲಿ, ಅವರನ್ನ ಸ್ವಚ್ಚಗೊಳಿಸಿ, ಹೇರ್ ಕಟ್ ಮಾಡೋದು, ನೀಟ್ ಶೇವ್ ಮಾಡೋದು ಅಂದ್ರೆ ಸುಮ್ನೆನಾ? ಇಲ್ಲ. ಆದ್ರೆ ಇಂತಹದ್ದೇ ಒಂದು ಕೆಲಸ ಮಾಡೋ ಬ್ಯೂಟಿಷಿಯನ್ ಒಬ್ರು ಸಕ್ಕರೆನಾಡು ಮಂಡ್ಯದಲ್ಲಿದ್ದಾರೆ.
ಹೌದು! ಆಶ್ಚರ್ಯ ಆದ್ರೂ ಇದು ನಿಜ. ಇಂತಹದ್ದೊಂದು ಮಾನವೀಯ ಕೆಲಸಕ್ಕೆ ಕೈಹಾಕಿರೋರು ನಾಗಮಂಗಲ ತಾಲೂಕಿನ ಚಾಮಲಾಪುರ ನಿವಾಸಿಯಾಗಿರುವ ಶೀಲಾ.
ಬಿಜಿ ನಗರದಲ್ಲಿ ಬ್ಯೂಟಿಪಾರ್ಲರ್ ಒಂದನ್ನ ನಡೆಸುತ್ತಿರುವ ಶೀಲಾ, ಸಮಯ ಸಿಕ್ಕಾಗಲೆಲ್ಲಾ ನಾಗಮಂಗಲ, ಬೆಳ್ಳೂರು, ಬಿಜಿ ನಗರದಲ್ಲಿ ರೌಂಡ್ ಹಾಕ್ತಿರ್ತಾರೆ. ಈ ವೇಳೆ ಭಿಕ್ಷುಕರು, ನಿರ್ಗತಿಕರು ಕಂಡರೆ ಅವರಿಗೆ ಹೇರ್ ಕಟ್, ಶೇವಿಂಗ್ ಹಾಗೂ ಸ್ನಾನ ಮಾಡಿಸಿ ಒಳ್ಳೆಯ ಡ್ರೆಸ್ ಹಾಕ್ತಾರೆ. ಜೊತೆಗೆ ನಿರ್ಗತಿಕರು ಒಪ್ಪಿದರೆ ಚನ್ನರಾಯಪಟ್ಟಣದ ಮಾತೃಭೂಮಿ ವೃದ್ಧಾಶ್ರಮಕ್ಕೆ ಸೇರಿಸ್ತಾರೆ.
ಇದರ ಜೊತೆಗೆ ಆಸ್ಪತ್ರೆಗಳ ಶಿಬಿರದಲ್ಲಿ ಆರೋಗ್ಯ ತಪಾಸಣೆಗೂ ನೆರವಾಗುತ್ತಾರೆ. ಅಲ್ಲದೆ ಹದಿನೈದು ದಿನಕೊಮ್ಮೆ ಆಶ್ರಮಕ್ಕೆ ಹೋಗಿ ವೃದ್ಧರಿಗೆ ಕ್ಷೌರ ಕೂಡ ಮಾಡ್ತಾರೆ. ಈ ಹಿಂದೆ ನಿರ್ಗತಿಕ ವೃದ್ಧೆಯೊಬ್ಬರನ್ನು ಒಂದು ವರ್ಷ ಕಾಲ ತಮ್ಮ ಮನೆಯಲ್ಲಿರಿಸಿಕೊಂಡು ಸಲುಹಿದ್ದಾರೆ.
ಇವರ ಈ ಸಹಾಯದಿಂದಾಗಿ ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿನ ಭಿಕ್ಷುಕರು, ನಿರ್ಗತಿಕರು ಸ್ವಚ್ಚವಾಗಿ ಕಾಣುತ್ತಿದ್ದಾರೆ. ಶೀಲಾರ ಈ ಸೇವೆಗೆ ಕುಟುಂಬದ ಸದಸ್ಯರು ಕೂಡ ಬೆಂಬಲ ನೀಡುತ್ತಿದ್ದು, ತಾಲೂಕಿನ ಜನರು ಇವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.