ಹಿಜಾಬ್ ವಿವಾದದ ಹಿಂದೆ ಹಿಡನ್‌ ಅಜೆಂಡಾ ಅಡಗಿದೆ: ಕುಮಾರಸ್ವಾಮಿ

ಹೊಸದಿಗಂತ ವರದಿ, ರಾಮನಗರ : 

ರಾಜ್ಯದಲ್ಲಿ ಅಶಾಂತಿ ವಾತಾವರಣ ಉಂಟು ಮಾಡುವ ಸಲುವಾಗಿಯೇ ಹಿಜಾಬ್‌ ವಿವಾದ ಸೃಷ್ಟಿ ಮಾಡಲಾಗಿದೆ. ಇದರ ಹಿಂದೆ ಇರುವ ಸಂಘಟನೆಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದರು.
ರಾಮನಗರದಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು . ‘ ವಿವಾದದ ಹಿಂದೆ ಹಿಡನ್‌ ಅಜೆಂಡಾ ಅಡಗಿದೆ. ರಾಷ್ಟ್ರೀಯ ಪಕ್ಷಗಳ ಅಧೀನದಲ್ಲಿ ಇರುವ ಸಂಘಸಂಸ್ಥೆಗಳು ಹಾಗೂ ಬೇರೆ ಬೇರೆ ಸಂಘಟನೆಗಳಿಂದ ಈ ಪರಿಸ್ಥಿತಿ ಉದ್ಬವ ಆಗಿದೆ. ಕರಾವಳಿ ಪ್ರದೇಶದ ದಕ್ಷಿಣ ಕನ್ನಡ, ಉಡುಪಿ ಮೊದಲಾದ ಜಿಲ್ಲೆಗಳಲ್ಲಿ ಸಮಸ್ಯೆ ಹುಟ್ಟುಹಾಕಲಾಗಿದ್ದು, ಇದನ್ನು ಪ್ರಾರಂಭಿಕ ಹಂತದಲ್ಲಿಯೇ ಸರ್ಕಾರ ಮೊಟಕುಗೊಳಿಸಬೇಕಿತ್ತು. ಈಗ ಈ ವಿವಾದ 10-12 ಜಿಲ್ಲೆಗಳಿಗೂ ಹಬ್ಬಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಅಭಿವೃದ್ಧಿ ಪರವಾದ ವಿಚಾರಗಳನ್ನು ಜನರ ಮುಂದೆ ಇಡಲು ಸಾಧ್ಯವಿಲ್ಲ. ಬೆಲೆ ಏರಿಕೆ, ಆರ್ಥಿಕ ಸಮಸ್ಯೆಯಿಂದ ಜನರು ತತ್ತರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರ ಗಮನವನ್ನು ಬೇರಡೆಗೆ ಸೆಳೆದು ಅವರಿಗೆ ಅನುಕೂಲ ಮಾಡಿಕೊಳ್ಳುವ ಸಲುವಾಗಿ ಈ ರೀತಿಯ ಪಿತೂರಿ ನಡೆದಿದೆ. ಸಾರ್ವಜನಿಕರು ಇಂತಹ ಘಟನೆಗಳಿಗೆ ಪ್ರೋತ್ಸಾಹ ನೀಡಬಾರದು ಎಂದು ಮನವಿ ಮಾಡಿದರು.
ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಅದನ್ನೇ ನಾವು ನಾಡಗೀತೆಯಾಗಿ ಹಾಡುತ್ತಿದ್ದೇವೆ. ಇಂತಹ ರಾಜ್ಯದಲ್ಲಿ ಕಲ್ಲು ಹೊಡೆಯುವ ವಾತಾವರಣ ನಿರ್ಮಾಣ ಆಗಿರುವುದು ದುರದೃಷ್ಟಕರ. ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇನ್ನೆರಡು ತಿಂಗಳಲ್ಲಿ ಪರೀಕ್ಷೆ ಸಹ ಬರೆಯಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಈ ರೀತಿಯ ವಿವಾದ ಸರಿಯಲ್ಲ. ಸರ್ಕಾರ ಇನ್ನಾದರೂ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು ಎಂದು ಸಲಹೆ ನೀಡಿದರು.
‘ರೈತರ ಮಕ್ಕಳು ಇನ್ನು ಮುಂದೆ ಹಸಿರು ಶಾಲು ಧರಿಸಿ ಶಾಲೆಗೆ ಹೋಗಿ’ ಎಂಬ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಎಚ್‌ಡಿಕೆ ‘ ಇದು ಖಂಡಿತ ಪ್ರಚೋದನೆ ಅಲ್ಲ. ರೈತರ ಸಂಕೇತ ತೋರಿಸಿ ಎಂದಷ್ಟೇ ಹೇಳಿದ್ದೇನೆ. ಹಸಿರು ಶಾಲಿಗೆ ಅದರದ್ದೇ ಆದ ಗೌರವ ಇದೆ’ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!