ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಕೆ ಶಿವಕುಮಾರ್ ಅವರ ಸ್ಥಾನಕ್ಕೆ ನೂತನ ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಬೇಕೆ ಅಥವಾ ಬೇಡವೇ ಎಂಬುದರ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಈ ವಿಚಾರ ನಮ್ಮ ಹಂತದಲ್ಲಿ ನಿರ್ಧಾರವಾಗುವಂತದ್ದಲ್ಲ ಎಂದು ಹೇಳಿದರು.
ಪಕ್ಷದ ರಾಜ್ಯ ಘಟಕದಲ್ಲಿ ನಾಯಕತ್ವ ಬದಲಾವಣೆಗೆ ಪಕ್ಷದ ಹಲವು ಮುಖಂಡರು ವರಿಷ್ಠರ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಒಬ್ಬೊಬ್ಬರು ಎರಡು ಹುದ್ದೆಯಲ್ಲಿದ್ದರೆ ಜವಾಬ್ದಾರಿಯನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಆದುದರಿಂದ, ಈ ಸಂಬಂಧ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡುವ ಕುರಿತು ಎಲ್ಲರೂ ಚರ್ಚೆ ಮಾಡಿದ್ದೇವೆ. ಪಕ್ಷ ಸಂಘಟನೆಗೆ ಹೆಚ್ಚು ಸಮಯ ಮೀಸಲಿಡುವಂತಹ ವ್ಯಕ್ತಿಯ ಹೆಸರನ್ನು ಶಿಫಾರಸ್ಸು ಮಾಡಿದ್ದೇವೆ. ಈ ಸ್ಥಾನಕ್ಕೆ ಮೃಣಾಲ್ ಹೆಬ್ಬಾಳ್ಕರ್ ಹೆಸರು ಚರ್ಚೆಗೆ ಬಂದಿಲ್ಲ ಎಂದಿದ್ದಾರೆ.