ಅಕ್ರಮವಾಗಿ ಕರೆದೊಯ್ದ ಅಪ್ರಾಪ್ತ ಮಗಳನ್ನು ತಾಯಿಗೆ ಒಪ್ಪಿಸಿ: ಹೈಕೋರ್ಟ್‌ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚಿಕಿತ್ಸೆಯ ನೆಪದಲ್ಲಿ ಮಗಳನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಅಪ್ರಾಪ್ತ ವಯಸ್ಸಿನ ಮಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ತಂದೆಗೆ, ಮಗಳನ್ನು ತಾಯಿಗೆ ಒಪ್ಪಿಸುವಂತೆ ಹೈಕೋರ್ಟ್​ಆದೇಶಿಸಿದೆ.

ಮಹಿಳೆಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಲೋಕ್ ಆರಾಧೆ ಮತ್ತು ವಿಜಯಕುಮಾರ ಎ. ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಈ ಪ್ರಕರಣದಲ್ಲಿ ತಂದೆ (ಅರ್ಜಿದಾರಳ ಪತಿ) ಮಗಳನ್ನು ಅಕ್ರಮವಾಗಿ ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿರುವ ಆರೋಪ ಸಾಬೀತಾಗಿದೆ’ ಎಂದು ಅಭಿಪ್ರಾಯಪಟ್ಟಿತು.

ಮಗಳನ್ನು ಕೂಡಲೇ ಅರ್ಜಿದಾರರ ಸುಪರ್ದಿಗೆ ಒಪ್ಪಿಸುವಂತೆ ಆಕೆಯ ಪತಿಗೆ ನಿರ್ದೇಶಿಸಿದ ಹೈಕೋರ್ಟ್‌, ಮಗಳ ಶಾಶ್ವತ ಸುಪರ್ದಿಗೆ ಕೋರಿ ಪತ್ನಿ ಬೆಂಗಳೂರಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ, ತಾನು ಮಗುವಿನ ಕಾನೂನುಬದ್ಧ ಪೋಷಕ ಎಂಬುದಾಗಿ ಘೋಷಿಸುವಂತೆ ಕೋರಿ ಪಶ್ಚಿಮ ಬಂಗಾಳದಲ್ಲಿ ಪತಿ ಅರ್ಜಿ ಸಲ್ಲಿಸಿದ್ದಾರೆ. ಎರಡೂ ಅರ್ಜಿಗಳು ಇತ್ಯರ್ಥವಾಗುವವರೆಗೆ ಮಗಳು ತಾಯಿಯ ವಶದಲ್ಲಿರಬೇಕು. ತಂದೆಗೆ ಮಗಳ ಭೇಟಿಯ ಹಕ್ಕು ನೀಡಬೇಕು ಎಂದು ನಿರ್ದೇಶಿಸಿದೆ.

‘ಮಗಳು ತಂದೆಯೊಂದಿಗೆ ಸಾಮಾಜಿಕ, ಭೌತಿಕ ಮತ್ತು ಮಾನಸಿಕ ಸಂಪರ್ಕವನ್ನು ಕಳೆದುಕೊಳ್ಳಬಾರದು. ದಂಪತಿ ಪ್ರತ್ಯೇಕವಾಗಿದ್ದರೂ ಮಗಳಿಗೆ ಪೋಷಕರ ಉತ್ತಮ ಆರೈಕೆ ದೊರೆಯುವಂತಾಗಬೇಕು. ಆ ದಿಸೆಯಲ್ಲಿ ನಿತ್ಯವೂ ಶಾಲೆಯಿಂದ ಮನೆಗೆ ಬಂದ ನಂತರ ತಂದೆ, ಮಗಳಿಗೆ ಪೋನ್ ಅಥವಾ ವಿಡಿಯೊ ಕರೆ ಮಾಡಿ ಯೋಗಕ್ಷೇಮ ವಿಚಾರಿಸಬಹುದು. ಮಗುವಿನ ಪ್ರತಿದಿನದ ಬೆಳವಣಿಗೆಯ ಬಗ್ಗೆ ಪತ್ನಿಯೂ ಪ್ರತಿ ಭಾನುವಾರ ಪತಿಗೆ ಮಾಹಿತಿ ನೀಡಬೇಕು. ಪತಿ ವಾರಾಂತ್ಯದಲ್ಲಿ ಬೆಂಗಳೂರಿಗೆ ಬಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮಗಳ ಜೊತೆಗೆ ಸಮಯ ಕಳೆಯಬಹುದು’ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: 2012ರ ಫೆಬ್ರುವರಿ 22ಕ್ಕೆ ಅಂತರ್ ಧರ್ಮೀಯ ವಿವಾಹವಾಗಿದ್ದ ದಂಪತಿಗೆ 2016ರ ಜೂನ್ 25ರಂದು ಮಗಳು ಜನಿಸಿದ್ದಳು. ದಂಪತಿ 2017ರ ಜನವರಿಯಿಂದ 2018ರ ಜೂನ್‌ವರೆಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿದ್ದರು. ಪತ್ನಿ ಮಗಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೆಲಸದ ನಿಮಿತ್ತ ಪತಿ ಪಶ್ಚಿಮ ಬಂಗಾಳದಲ್ಲಿ ವಾಸವಾಗಿದ್ದರು.

2022ರ ಡಿಸೆಂಬರ್ 16ರಂದು ಬೆಂಗಳೂರಿಗೆ ಬಂದಿದ್ದ ಪತಿ, ಮಗಳನ್ನು ವೈದ್ಯರ ಬಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿದ್ದರು. ಇದರಿಂದ ಪತ್ನಿ ಹೈಕೋರ್ಟ್​ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!