ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶ ಸರ್ಕಾರಕ್ಕೆ ಕೋರ್ಟ್ ಶಾಕ್ ಕೊಟ್ಟಿದೆ. ಸೆಲಿ ಹೈಡ್ರೋ ವಿದ್ಯುತ್ ಕಂಪನಿಗೆ 64 ಕೋಟಿ ರೂ. ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ದೆಹಲಿಯ ಹಿಮಾಚಲ ಭವನವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಹಿಮಾಚಲ ಪ್ರದೇಶ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ.
ಮುಂದಿನ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಕಾಯ್ದಿರಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ಕಂಪನಿಗೆ ಶೇ.7ರಷ್ಟು ಬಡ್ಡಿಯೊಂದಿಗೆ ಮುಂಗಡ ಪ್ರೀಮಿಯಂ ಪಾವತಿಸುವಂತೆ ಆದೇಶಿಸಿದೆ. ಜೊತೆಗೆ ಬಿಲ್ ಪಾವತಿಯಾಗದಿರಲು ಕಾರಣವಾದ ಅಧಿಕಾರಿಗಳನ್ನು ಪತ್ತೆ ಹಚ್ಚಿ 15 ದಿನಗಳಲ್ಲಿ ವರದಿ ಕೊಡಲು ಹಿಮಾಚಲ ಪ್ರದೇಶ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದೆ.
ಪ್ರಕರಣ ಸಂಬಂಧ ಸತ್ಯಶೋಧನೆ ತನಿಖೆ ನಡೆಸುವಂತೆ ನ್ಯಾಯಾಲಯವು ವಿದ್ಯುತ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿದೆ. ಇದರಿಂದ ತೀವ್ರ ಮುಖಭಂಗ ಅನುಭವಿಸಿರುವ ಸರ್ಕಾರ, ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.
ಏನಿದು ಪ್ರಕರಣ?
2009 ರಲ್ಲಿ, ಹಿಮಾಚಲ ಪ್ರದೇಶದ ಅಂದಿನ ಸರ್ಕಾರವು ಲಾಹೌಲ್-ಸ್ಪಿತಿ ಜಿಲ್ಲೆಗೆ ಸಂಬಂಧಿಸಿದಂತೆ ಸೆಲಿ ಹೈಡ್ರೋ (Seli Hydro) ಕಂಪನಿಗೆ 400 MW ವಿದ್ಯುತ್ ಯೋಜನೆಯನ್ನು ಮಂಜೂರು ಮಾಡಿತ್ತು. ಯೋಜನೆಗೆ ಅಗತ್ಯವಿರುವ ರಸ್ತೆ ನಿರ್ಮಾಣಕ್ಕೆ ಸಹಾಯ ಮಾಡಲು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಅನ್ನು ಸಹ ನಿಯೋಜಿಸಲಾಗಿತ್ತು. ಒಪ್ಪಂದದ ಪ್ರಕಾರ, ರಾಜ್ಯ ಸರ್ಕಾರವು ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಲು ಹೈಡ್ರೋ ಕಂಪನಿಗೆ ಮೂಲಸೌಕರ್ಯ ಒದಗಿಸಬೇಕಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇದರಿಂದ ಕಂಪನಿಯು 2017 ರಲ್ಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ನಂತರ ಸೌಲಭ್ಯಗಳ ಕೊರತೆಯಿಂದಾಗಿ, ಕಂಪನಿಯು ಯೋಜನೆಯನ್ನು ಸ್ಥಗಿತಗೊಳಿಸಿತು. ಇದರಿಂದ ಕಂಪನಿ ಪಂಚಾಯಿತಿಯಲ್ಲಿ ಠೇವಣಿ ಇರಿಸಿದ್ದ 64 ಕೋಟಿ ರೂ. ಮುಂಗಡ ಹಣವನ್ನು 7% ಬಡ್ಡಿಯೊಂದಿಗೆ ಹಿಂದಿರುಗಿಸುವಂತೆ ಕೋರ್ಟ್ ಸರ್ಕಾರಕ್ಕೆ ಆದೇಶಿಸಿತ್ತು. ಆದ್ರೆ ಅಂದಿನ ಸರ್ಕಾರ ಕೋರ್ಟ್ ಆದೇಶವನ್ನು ಧಿಕ್ಕರಿಸಿದ ಕಾರಣ ಬಡ್ಡಿ ಸೇರಿ ಈಗ ಬಾಕಿ ಮೊತ್ತ 150 ಕೋಟಿ ರೂ. ತಲುಪಿದೆ. ಇದೀಗ ಸರ್ಕಾರವು ಈ ಮೊತ್ತವನ್ನು ಬರಿಸಬೇಕು ಎಂದು ಕೋರ್ಟ್ ಹೇಳಿದೆ.