ಹಿಜಾಬ್ ವಿವಾದ: ರಾಜ್ಯದ ಶಾಲಾ-ಕಾಲೇಜುಗಳ ಪರಿಸ್ಥಿತಿ ಹೇಗಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ಕಾಲೇಜಿನಿಂದ ಆರಂಭವಾದ ಹಿಜಾಬ್ ವಿವಾದ ಇದೀಗ ರಾಜ್ಯವನ್ನೇ ಆವರಿಸಿದೆ. ಹಿಜಾಬ್ ನಮ್ಮ ಹಕ್ಕು ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿದರೆ, ಹಿಜಾಬ್ ಧರಿಸಿದರೆ ನಾವು ಕೇಸರಿ ಶಾಲು ಧರಿಸುತ್ತೇವೆ ಎಂದು ಹಿಂದೂ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.

ಈ ಬಗ್ಗೆ ನಿನ್ನೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ತೀರ್ಪಿಗಾಗಿ ರಾಜ್ಯವೇ ಕಾದು ಕುಳಿತಿದೆ. ಈ ಮಧ್ಯೆ ರಾಜ್ಯದಲ್ಲಿ ಯಾವ ಪರಿಸ್ಥಿತಿ ಇದೆ ಎನ್ನುವ ಮಾಹಿತಿ ಇಲ್ಲಿದೆ..

ಬಳ್ಳಾರಿಯಲ್ಲಿ ಹಿಜಾಬ್ ಗಲಾಟೆ ಜೋರಾಗಿದ್ದು, ವಿದ್ಯಾರ್ಥಿನಿಯರು ತರಗತಿಯಿಂದ ಹೊರಗೆ ಕುಳಿತಿದ್ದಾರೆ. ಕುಂಕುಮ, ಸಿಂಧೂರ ಕೂಡ ಧಾರ್ಮಿಕ ಚಿಹ್ನೆ ಅದಕ್ಕೆ ಮಾತ್ರ ಯಾಕೆ ಅವಕಾಶ ಎಂದು ವಿದ್ಯಾರ್ಥಿನಿಯರು ಪ್ರತಿಭಟಿಸುತ್ತಿದ್ದಾರೆ.

ಕೋಲಾರದಲ್ಲಿಯೂ ಹಿಜಾಬ್ ತೆಗೆಸಿದರೆ ನಮಗೆ ಶಿಕ್ಷಣವೇ ಬೇಡ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. ಬುರ್ಖಾ, ಹಿಜಾಬ್ ನಮಗೆ ಸುರಕ್ಷತೆ ಅದನ್ನು ತೆಗೆಯೋದಿಲ್ಲ ಎಂದಿದ್ದಾರೆ. ಇತ್ತ ಶಿವಮೊಗ್ಗದ ಡಿವಿಎಸ್ ಕಾಲೇಜು ಬಳಿ ವಿದ್ಯಾರ್ಥಿನಿಯರು ಹೈ ಡ್ರಾಮಾ ಮಾಡುತ್ತಿದ್ದು, ತರಗತಿ ಒಳಗೆ ತೆರಳದೆ ಕುಳಿತಿದ್ದಾರೆ.

ಧಾರವಾಡದಲ್ಲಿ ಶಾಲಾ ಕಾಲೇಜುಗಳ ಬಳಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಇಷ್ಟು ದಿನ ಶಾಂತವಾಗಿದ್ದ ಚಿತ್ರದುರ್ಗದಲ್ಲೂ ಇದೀಗ ಹಿಜಾಬ್ ಗಲಾಟೆ ಆರಂಭವಾಗಿದೆ. ರಾಯಚೂರಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ನಮಗೆ ಹಿಜಾಬ್‌ಗಿಂತ ಶಿಕ್ಷಣ ಮುಖ್ಯ ಎಂದು ಹಿಜಾಬ್ ತೆಗೆದು ತರಗತಿ ಒಳಗೆ ಹೋಗಿದ್ದಾರೆ.

ರಾಮನಗರ ಸರ್ಕಾರಿ ಶಾಲೆಗೆ ರಜೆ ಘೋಷಣೆ

ರಾಮನಗರ : ಕೊರೊನಾದಿಂದಾಗಿ ಮಕ್ಕಳ ಶಿಕ್ಷಣಕ್ಕೆ ಈಗಾಗಲೇ ತೊಂದರೆಯಾಗಿದೆ. ಸರಿಯಾಗಿ ತರಗತಿಗಳು ನಡೆದಿಲ್ಲ. ಶೈಕ್ಷಣಿಕ ವರ್ಷ ಮುಗಿಯುವ ಸಮಯ ಬೇರೆ ಹತ್ತಿರವಿದೆ.
ಈ ಮಧ್ಯೆ ಹಿಜಾಬ್ ವಿವಾದ ರಾಜ್ಯದಲ್ಲಿ ಜೋರಾಗಿಯೇ ಭುಗಿಲೆದ್ದಿದೆ. ಈ ಹಿನ್ನೆಲೆ ರಾಮನಗರದಲ್ಲಿ ಪ್ರಥಮ ದರ್ಜೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.
ನಿನ್ನೆಯಷ್ಟೇ ಕಾಲೇಜುಗಳು ಪುನರಾರಂಭಗೊಂಡಿವೆ. ಈ ಮಧ್ಯೆ ಅಲ್ಲಲ್ಲಿ ಹಿಜಾಬ್ ಬಗ್ಗೆ ಗೊಂದಲ, ಮಾತಿನ ಚಕಮಕಿ ನಡೆಯುತ್ತಲೆ ಇದೆ. ಇದೇ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಕಾಲೇಜು ಪುನರಾರಂಭವಾದ ಮೊದಲ ದಿನವೇ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಆಡಳಿತ ಮಂಡಳಿ ಎಷ್ಟೇ ಹೇಳಿದ್ರು ಹಿಜಾಬ್ ತೆಗೆಯಲಿಲ್ಲ.
ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಈ ಆದೇಶ ಹೊರಡಿಸಿದ್ದಾರೆ. ಕಾಲೇಜಿಗೆ ರಜೆ ಘೋಷಣೆ ಮಾಡಿದ್ದಾರೆ. ಮುಂದಿನ ಆದೇಶದ ತನಕವೂ ಆನ್ಲೈನ್ ಕ್ಲಾಸ್ ನಡೆಸುವಂತೆ ಕಾಲೇಜು ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ.

ಬನವಾಸಿಯಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಮನೆಗೆ..

ಬನವಾಸಿ : ಹಿಜಾಬ್‌ ವಿವಾದ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿಯೂ ಆರಂಭಗೊಂಡಿದ್ದು ಹಿಜಾಬ್‌ ಧರಿಸಿ ಆಗಮಿಸಿದ ವಿದ್ಯಾರ್ಥಿನಿಯರನ್ನು ಮನೆಗೆ ಕಳುಹಿಸಿದ ಘಟನೆ ಗುರವಾರ ನಡೆದಿದೆ.
ಕಾಲೇಜಿನ 28 ಜನ ವಿಧ್ಯಾರ್ಥಿನಿಯರ ಪೈಕಿ 17 ಜನ ವಿಧ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು, ಉಳಿದ 11 ಜನ ವಿಧ್ಯಾರ್ಥಿನಿಯರು ಗುರುವಾರ ಗೈರು ಹಾಜರಾಗಿದ್ದರು. ಹಿಜಾಬ್ ಧರಸಿ ಬಂದ ವಿಧ್ಯಾರ್ಥಿನಿಯರ ಪರ ಆಗಮಿಸಿದ್ದ ಮುಸ್ಲಿಂ ಸಮುದಾಯದ ಕೆಲ ಗ್ರಾಪಂ ಸದಸ್ಯರ ಸಮ್ಮುಖದಲ್ಲಿ ಕಾಲೇಜಿನ ಪ್ರಾಂಶುಪಾಲರು ಹೈಕೋರ್ಟ್ ಮತ್ತು ಇಲಾಖೆಯ ಆದೇಶವನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಆದೇಶದಂತೆ ಹಿಜಾಬ್ ತೆಗೆದು ಕಾಲೇಜ್ ಗೆ ಬನ್ನಿ ಎಂದು ತಿಳುವಳಿಕೆ ನೀಡಿದರೂ. ಈ ಸಂದರ್ಭದಲ್ಲಿ ಬನವಾಸಿ ಗ್ರಾಪಂನ ಸದಸ್ಯ ಅಲ್ತಾಫ್ ಚೌದರಿ, ಹಿಜಾಬ್ ನಮ್ಮ ಧರ್ಮದ ಪ್ರತೀಕವಾಗಿದೆ. ಪರಂಪಾರಿಕವಾಗಿ ಬೆಳೆದು ಬಂದ ಸಂಪ್ರದಾಯವಾಗಿದೆ. ಹಿಜಾಬ್ ತೆಗೆಯಲು ಆಗುವುದಿಲ್ಲ ಎಂದರು. ಸುಮಾರು ಒಂದು ಗಂಟೆಗಳ ಕಾಲ ಚರ್ಚಿಸಿದರು ಯಾವುದೇ ಪ್ರಯೋಜವಾಗಲಿಲ್ಲ. ಹಿಜಾಬ್‌ ತೆಗೆಯಲು ಒಪ್ಪದೆ ಇದ್ದಾಗ 17 ವಿಧ್ಯಾರ್ಥಿನಿಯರನ್ನು ಪ್ರಾಂಶುಪಾಲರು ಮನೆಗೆ ಕಳುಹಿಸಿದರು.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!