ಹಿಜಾಬ್ ಹಠಕ್ಕೆ ಮಣೆ ಹಾಕದ ರಾಜ್ಯ ಸರ್ಕಾರ, ಆಡಳಿತ ಮಂಡಳಿಯ ಸಮವಸ್ತ್ರವೇ ಅಂತಿಮ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ / ವಸ್ತ್ರ ಸಂಹಿತೆ ಸಂಬಂಧಿಸಿ ಭಾರೀ ವಿವಾದ ಉಂಟಾಗಿತ್ತು. ಇದೀಗ ರಾಜ್ಯ ಸರಕಾರ ಶೈಕ್ಷಣಿಕ ಕ್ಷೇತ್ರದ ಸಮವಸ್ತ್ರ ನಿಯಮದ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಅನ್ವಯ ಶಾಲಾ, ಕಾಲೇಜುಗಳಲ್ಲಿ ನಿಗದಿಪಡಿಸಿರುವ ಸಮವಸ್ತ್ರದ ನಿಯಮಗಳನ್ನು ಪಾಲಿಸುವಂತೆ ಶನಿವಾರ ಸರಕಾರ ಆದೇಶ ಹೊರಡಿಸಿದೆ. ಕಾಯ್ದೆಯನ್ವಯ ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲಿ ಸರಕಾರ ನಿಗದಿಪಡಿಸಿರುವ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು. ಖಾಸಗಿ ಶಾಲೆಗಳು ತಮ್ಮ ಆಡಳಿತ ಮಂಡಳಿಗಳು ನಿರ್ಧರಿಸುವ ಸಮವಸ್ತ್ರವನ್ನು ಧರಿಸಬೇಕೆಂದು ಆದೇಶ ನೀಡಿದೆ.

ಅದೇ ರೀತಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಆಯಾ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿಯ ಮೇಲ್ವಿಚಾರಣಾ ಸಮಿತಿ ನಿರ್ಧರಿಸುವಂತಹ ಸಮವಸ್ತ್ರಗಳನ್ನು ಧರಿಸಬೇಕು. ಆಡಳಿತ ಮಂಡಳಿಗಳು ನಿಗದಿಪಡಿಸದೇ ಇದ್ದರೆ, ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದಂತೆ ಇರುವ ಉಡುಪುಗಳನ್ನು ಧರಿಸಬೇಕು ಎಂದು ಸರಕಾರ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ರಾಜ್ಯದ ಎಲ್ಲ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಏಕರೂಪ ಕಲಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ಕೆಲವು ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಧರ್ಮದ ಅನುಸಾರ ಆಚರಣೆಗಳನ್ನು ಪಾಲಿಸುತ್ತಿರುವುದು ಕಂಡು ಬಂದಿದೆ. ಇದರಿಂದ ಶಾಲಾ ಕಾಲೇಜುಗಳಲ್ಲಿ ಸಮಾನತೆ ಮತ್ತು ಏಕತೆಗೆ ಧಕ್ಕೆ ಬರುತ್ತಿರುವುದು ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದೆ.

ವೈಯಕ್ತಿಕ ವಸ್ತ್ರ ಸಂಹಿತೆಗಿಂತ ಏಕರೂಪ ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಮತ್ತು ಕೇರಳ ಉಚ್ಚ ನ್ಯಾಯಾಲಯ, ಬಾಂಬೆ ಹೈಕೋರ್ಟ್, ಮದ್ರಾಸ್ ಹೈಕೋರ್ಟ್‌ಗಳು ನೀಡಿದ ತೀರ್ಪನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ತೀರ್ಪುಗಳನ್ವಯ ಶಿರವಸ್ತ್ರ (ಹಿಜಾಬ್) ಧರಿಸಿ ಅಥವಾ ತಲೆಯನ್ನು ಮುಚ್ಚಿಕೊಂಡು ಶಾಲೆಗೆ ಬರದಂತೆ ನಿರ್ದೇಶಿಸಿರುವುದು ಸಂವಿಧಾನದ ಅನುಚ್ಛೇದ 25ರ ಉಲ್ಲಂಘನೆ ಅಲ್ಲವೆಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!