ದಿಗಂತ ವರದಿ ಅಂಕೋಲಾ:
ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತದಿಂದಾಗಿ ಭಾರೀ ಪ್ರಮಾಣದಲ್ಲಿ ಅನಾಹುತ ಸಂಭವಿಸಿದ್ದು ಒಂದೇ ಕುಟುಂಬದ ಐದು ಜನರು ಸೇರಿದಂತೆ ಸುಮಾರು 15 ಜನರು ಮಣ್ಣಿನ ಅಡಿ ಸಿಲುಕಿರುವ ಅಥವಾ ಮಣ್ಣಿನ ಜೊತೆಗೆ ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದುವರೆಗೂ ಈ ಐವರ ಇರುವಿಕೆ ಪತ್ತೆಯಾಗಿರದ ಕಾರಣ ಮಣ್ಣಿನಡಿ ಇರುವ ನಿರ್ಧಾರಕ್ಕೆ ಜಿಲ್ಲಾಡಳಿತ ಬಂದಿದೆ.
ಇನ್ನು ಗುಡ್ಡ ಕುಸಿದ ಸ್ಥಳದಲ್ಲಿ ಇದ್ದ ಮೂರು ಅಂಗಡಿಗಳು ಮತ್ತು ಒಂದು ಮನೆ ಮಣ್ಣಿನ ಅಡಿ ಸಿಲುಕಿದ್ದು ಅಂಗಡಿ ಮಾಲಿಕ ಲಕ್ಷ್ಮಣ ನಾಯ್ಕ(47) ಅವರ ಪತ್ನಿ ಶಾಂತಿ(36) ಮನೆಯಲ್ಲಿ ಇದ್ದ ಅವರ ಮಗ ರೋಶನ (11) ಮಗಳು ಆವಂತಿಕಾ(6) ಮತ್ತು ಅವರ ಮನೆಗೆ ಹಿಂದಿನ ದಿನ ಬಂದು ಉಳಿದುಕೊಂಡಿದ್ದ ಅವರ ಸಂಬಂಧಿ
ಜಗನ್ನಾಥ (55) ಎನ್ನುವವರು ಕಣ್ಮರೆಯಾಗಿದ್ದು ಅವರು ಬದುಕಿರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ಗುಡ್ಡ ಕುಸಿತ ನಡೆದಿರುವ ಪ್ರದೇಶದಲ್ಲಿ ಇರುವ ಲಕ್ಷ್ಮಣ ನಾಯ್ಕ ಅವರಿಗೆ ಸೇರಿದ ಚಹಾ ತಿಂಡಿ ಅಂಗಡಿ ಮತ್ತು ಇನ್ನೊಂದು ಅಂಗಡಿ ಬಳಿ ಲಾರಿ ಸೇರಿದಂತೆ ಹಲವಾರು ವಾಹನಗಳು ನಿಂತಿದ್ದು ವಾಹನದಲ್ಲಿ ಇರುವ ಹಲವರು ಮಣ್ಣಿನ ಅಡಿ ಸಿಲುಕಿರುವ ಸಾಧ್ಯತೆಗಳು ಇವೆ. ಗ್ಯಾಸ್ ಟ್ಯಾಂಕರ್ ಒಂದು ಗಂಗಾವಳಿ ನದಿ ನೀರಿನಲ್ಲಿ ತೇಲಿ ಹೋಗಿದ್ದು ಅದು ಅನಿಲ ತುಂಬಿದ ಟ್ಯಾಂಕರ್ ಆಗಿದ್ದರೆ ಇನ್ನಷ್ಟು ಅವಘಡಗಳು ಸಂಭವಿಸುವ ಸಾಧ್ಯತೆ ಇದೆ.
ಮಣ್ಣು ತೆರುವು ಕಾರ್ಯಾಚರಣೆ ನಡೆದ ನಂತರ ಸಾವು ನೋವುಗಳ ಕುರಿತು ಸ್ಪಷ್ಟ ಚಿತ್ರಣ ದೊರಕಲಿದ್ದು
ಈಗ ಗುಡ್ಡ ಕುಸಿದು ಬಿದ್ದ ಸ್ಥಳದಲ್ಲಿ ಮತ್ತು ಸಮೀಪದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಇನ್ನಷ್ಟು ಗುಡ್ಡ ಕುಸಿಯುವ ಸಾಧ್ಯತೆಗಳು ಕಂಡು ಬರತೊಡಗಿದ್ಧು ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣು ತೆರುವು ಕಾರ್ಯಾಚರಣೆಗೆ ತೊಡಕು ಉಂಟಾಗುತ್ತಿದೆ.