August 26, 2026
Wednesday, August 26, 2026
spot_img

ಪಶ್ಚಿಮ ಘಟ್ಟದ ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ: ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಪಶ್ಚಿಮ ಘಟ್ಟದ ತಟದಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯ ಆರ್ಭಟಕ್ಕೆ ಘಾಟಿ ಪ್ರದೇಶದಲ್ಲಿ ಬೃಹತ್ ಗುಡ್ಡ ಕುಸಿದು ಬಿದ್ದಿದೆ. ಇದರ ಪರಿಣಾಮವಾಗಿ ಬೆಂಗಳೂರು ಹಾಗೂ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ಸಂಪೂರ್ಣವಾಗಿ ಬಂದ್ ಆಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಎರಡು ಪ್ರಮುಖ ರೈಲುಗಳ ಸೇವೆಯನ್ನು ಇಂದು ಭಾನುವಾರ ರದ್ದುಗೊಳಿಸಿದೆ.

ಹಳಿಗಳ ಮೇಲೆ ಜಾರಿ ಬಂದ ಬೆಟ್ಟದ ಮಣ್ಣು:

ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದ ಸಿರಿಬಾಗಿಲು ಸಮೀಪ ತಡರಾತ್ರಿ ಈ ಭೀಕರ ಪ್ರಕೃತಿ ವಿಕೋಪ ಸಂಭವಿಸಿದೆ. ಮಳೆಯ ತೀವ್ರತೆಗೆ ಪಶ್ಚಿಮ ಘಟ್ಟದ ಬೆಟ್ಟದ ಒಂದು ಭಾಗವೇ ಜಾರಿ ರೈಲ್ವೆ ಹಳಿಗಳ ಮೇಲೆ ಬಿದ್ದಿದೆ. ಟನ್‌ಗಟ್ಟಲೆ ಮಣ್ಣು, ಬಿದ್ದಿರುವುದರಿಂದ ರೈಲು ಸಂಚಾರಕ್ಕೆ ಸಂಪೂರ್ಣ ಅಡ್ಡಿಯಾಗಿದೆ.

ಪ್ರಮುಖ ರೈಲುಗಳ ಸೇವೆ ರದ್ದು

ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಮಂಗಳೂರು ಜಂಕ್ಷನ್ – ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ (ಸಂಖ್ಯೆ 16540 ) ಭಾನುವಾರದ ಪ್ರಯಾಣವನ್ನು ರದ್ದುಗೊಳಿಸಲಾಗಿದೆ. ಹಾಗೂ ಯಶವಂತಪುರ – ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ ರೈಲಿನ (16575) ಪ್ರಯಾಣವನ್ನು ರದ್ದುಗೊಳಿಸಲಾಗಿದೆ. ಈ ಎರಡು ರೈಲುಗಳ ಸಂಚಾರ ರದ್ದತಿಯಿಂದಾಗಿ ವಾರಾಂತ್ಯ ಮುಗಿಸಿ ರಾಜಧಾನಿಗೆ ಮರಳಬೇಕಿದ್ದ ಮತ್ತು ಕರಾವಳಿಗೆ ಪ್ರಯಾಣಿಸಬೇಕಿದ್ದ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ:

ಯುದ್ಧೋಪಾದಿಯಲ್ಲಿ ತೆರವು ಕಾರ್ಯಾಚರಣೆ:

ಘಟನೆ ನಡೆದ ಸ್ಥಳಕ್ಕೆ ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಯ ರೈಲ್ವೆ ತಾಂತ್ರಿಕ ವಿಭಾಗದ ಹಿರಿಯ ಅಧಿಕಾರಿಗಳು ಹಾಗೂ ನೂರಾರು ಕಾರ್ಮಿಕರು ಧಾವಿಸಿದ್ದಾರೆ. ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳ ಸಹಾಯದಿಂದ ಹಳಿಯ ಮೇಲಿರುವ ಮಣ್ಣಿನ ರಾಶಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಆದರೆ, ಘಾಟಿ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ದಟ್ಟವಾದ ಮಂಜು ರಕ್ಷಣಾ ಕಾರ್ಯಾಚರಣೆಗೆ ತೀವ್ರ ಸವಾಲೊಡ್ಡಿದೆ. ಹಳಿಗಳು ಸಂಪೂರ್ಣ ಯತಾಸ್ಥಿತಿಗೆ ಬರಲು ಕನಿಷ್ಠ 24 ರಿಂದ 36 ಗಂಟೆಗಳು ಬೇಕಾಗಬಹುದು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !