ಹಿಂಡೆನ್‌ಬರ್ಗ್‌ ತನಿಖಾ ವರದಿ- ಒಂದೇ ದಿನದಲ್ಲಿ 48 ಸಾವಿರ ಕೋಟಿ ರೂ. ಕಳೆದುಕೊಂಡ ಅದಾನಿ ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೆರಿಕ ಮೂಲದ ತನಿಖಾ ಸಂಸ್ಥೆಯೊಂದು ಪ್ರಕಟಿಸಿದ ವರದಿಯಿಂದಾಗಿ ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿರೋ ಬಿಲಿಯನೇರ್‌ ಗೌತಮ್‌ ಅದಾನಿ ಸಾವಿರಾರು ಕೋಟಿ ರೂಪಾಯಿ ಮೌಲ್ಯವನ್ನು ಕಳೆದುಕೊಂಡಿದ್ದಾರೆ. ಅಮೆರಿಕದ ಹಿಂಡೆನ್‌ಬರ್ಗ್‌ ಎಂಬ ತನಿಖಾ ಸಂಸ್ಥೆಯೊಂದು ಅದಾನಿ ಸಮೂಹದ ಏಳು ಅಂಗ ಸಂಸ್ಥೆಗಳ ಕುರಿತು ವರದಿಯೊಂದನ್ನು ಪ್ರಕಟಿಸಿತ್ತು. ಆ ವರದಿಯಲ್ಲಿ ಅದಾನಿ ಸಮೂಹದಿಂದ ಲಿಸ್ಟೆಡ್ ಆಗಿರುವ ಏಳು ಕಂಪನಿಗಳು ಗಣನೀಯ ಸಾಲವನ್ನು ಹೊಂದಿದೆ. ಇದು ಇಡೀ ಸಮೂಹವನ್ನು ಆರ್ಥಿಕ ಅನಿಶ್ಚಿತತೆಯ ತಳಹದಿಯಲ್ಲಿ ಸಿಲುಕಿಸಿದೆ ಎಂದು ಹೇಳಿತ್ತು.

ಈ ವರದಿಯ ಪರಿಣಾಮ ಅದಾನಿ ಸಮೂಹದ ಕಂಪನಿಗಳ ಬಾಂಡ್‌ಗಳು ಮತ್ತು ಷೇರುಗಳು ನಿನ್ನೆ 3 ರಿಂದ 7 ಶೇಕಡಾ ಕುಸಿದಿದೆ. ಇದು ಅದಾನಿಯವರಿಗೆ ಒಂದೇ ದಿನದಲ್ಲಿ ಅತಿಹೆಚ್ಚು ನಷ್ಟವನ್ನುಂಟು ಮಾಡಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಗೌತಮ್ ಅದಾನಿ ಒಂದೇ ದಿನದಲ್ಲಿ ಸುಮಾರು 5 ಶೇಕಡಾದಷ್ಟು ಮೌಲ್ಯ ಅಂದರೆ ಸರಿಸುಮಾರು 6 ಶತಕೋಟಿ ಡಾಲರ್ (ಸುಮಾರು ₹48,600 ಕೋಟಿ) ಕಳೆದುಕೊಂಡಿದ್ದಾರೆ. ಜನವರಿ 26 ರ ದಿನದ ಅಂತ್ಯಕ್ಕೆ ಅವರ ಒಟ್ಟೂ ಆಸ್ತಿಗಳ ನಿವ್ವಳ ಮೌಲ್ಯವು 113 ಬಿಲಿಯನ್ ಡಾಲರ್‌ ನಷ್ಟಾಗಿದೆ.

ಆದರೆ ಅದಾನಿ ಗ್ರೂಪ್ ಹಿಂಡೆನ್‌ಬರ್ಗ್‌ ನ ಈ ವರದಿಯನ್ನು ತಳ್ಳಿ ಹಾಕಿದ್ದು ʼಇದು ದುರುದ್ದೇಶ ಪೂರಿತವಾಗಿದ್ದು ತಪ್ಪು ಮಾಹಿತಿಯಿಂದ ಕೂಡಿದೆʼ ಎಂದು ಹೇಳಿದೆ. ಅಲ್ಲದೇ ಹಿಂಡೆನ್‌ ಬರ್ಗ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಹಿಂಡೆನ್‌ಬರ್ಗ್‌ ಸಂಸ್ಥೆಯೂ ಕೂಡ ಅದಾನಿಯವರ ಆರೋಪವನ್ನು ತಳ್ಳಿಹಾಕಿದ್ದು ಕಾನೂನು ಕ್ರಮವನ್ನು ಎದುರಿಸಲು ಸಿದ್ಧವಿರುವುದಾಗಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!