ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿ ಬಿಗ್ ಬಾಸ್ (Bigg Boss) ಶೋನಲ್ಲಿ ತನ್ನದೇ ಹವಾ ಕ್ರಿಯೇಟ್ ಮಾಡಿದ ನಟಿ ಅರ್ಚನಾ ಗೌತಮ್ (Archana Gautam) ಅವರನ್ನು ಕಾಂಗ್ರೆಸ್ (Congress) ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.
ಬಿಗ್ ಬಾಸ್ ಸೀಸನ್ 16ರಲ್ಲಿ ಅರ್ಚನಾ ಭಾಗಿಯಾಗಿದ್ದರು. ಸಿನಿಮಾಗಳ ಜೊತೆ ಜೊತೆಗೆ ರಾಜಕಾರಣದಲ್ಲೂ ಸಕ್ರಿಯರಾಗಿದ್ದರು. ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ಇವರು ಗುರುತಿಸಿಕೊಂಡಿದ್ದರು. ಇದೀ ಪಕ್ಷದ ಕಾರ್ಯಕರ್ತರೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದ ವಕ್ತಾರ ಅಂಶು ಅವಸ್ತಿ ಹೇಳಿದ್ದಾರೆ.
ಮೊನ್ನೆಯಷ್ಟೇ ಅರ್ಚನಾ ಮತ್ತು ಅವರ ತಂದೆಯ ಮೇಲೆ ದೆಹಲಿಯ ಕಾಂಗ್ರೆಸ್ ಕಚೇರಿ ಎದುರು ಭಾರಿ ಹಲ್ಲೆ ಮಾಡಲಾಗಿತ್ತು. ಮೊನ್ನೆ ಅರ್ಚನಾ ಅವರು ತಂದೆಯೊಂದಿಗೆ ಪಕ್ಷದ ಕಚೇರಿಗೆ ಎಂಟ್ರಿ ಕೊಡುವ ಸಮಯದಲ್ಲಿ, ಅವರ ಪಕ್ಷದ ಕಚೇರಿ ಎದುರೇ ಹೊಡೆದು ಥಳಿಸಲಾಗಿತ್ತು. ಇದರ ವಿಡಿಯೋ ವೈರಲ್ ಆಗಿತ್ತು. ಇದೀಗ ಅವರನ್ನು ಆರು ವರ್ಷಗಳ ಕಾಲ ಕಾಂಗ್ರೆಸ್‌ನಿಂದ ಹೊರಹಾಕಲಾಗಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಅಂಶು ಅವಸ್ತಿ ಖಚಿತಪಡಿಸಿದ್ದಾರೆ.
ಬಿಗ್ ಬಾಸ್ ನಿಂದ ಬಂದ ನಂತರ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು ಅರ್ಚನಾ. ಪ್ರಿಯಾಂಕಾ ಗಾಂಧಿ ಅವರ ಜೊತೆಯೂ ಗುರುತಿಸಿಕೊಂಡಿದ್ದರು. ಹಾಗಾಗಿ 2022ರಲ್ಲಿ ಕಾಂಗ್ರೆಸ್ ಪಕ್ಷವು ಹಸ್ತಿನಾಪುರ ಕ್ಷೇತ್ರದಿಂದ ಅರ್ಚನಾ ಅವರನ್ನು ಕಣಕ್ಕಿಳಿಸಿತ್ತು. ಇವರ ಬೆಂಬಲಕ್ಕೆ ನಿಂತ ಅಲ್ಲಿನ ಜನರ ಜೊತೆಗೆ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಹಸ್ತಿನಾಪುರ ಕ್ಷೇತ್ರದಿಂದ ಅರ್ಚನಾ ಗೆದ್ದಿರಲಿಲ್ಲ. ಕೇವಲ 1519 ಮತಗಳನ್ನು ಪಡೆದಿದ್ದರು. ಈ ಮೂಲಕ ಠೇವಣಿ ಕೂಡ ಕಳೆದುಕೊಂಡಿದ್ದರು. ಈ ಹೀನಾಯ ಸೋಲನ್ನು ಕಾಂಗ್ರೆಸ್ ಅರಗಿಸಿಕೊಳ್ಳಲು ಆಗಿರಲಿಲ್ಲ. ಹೀಗಾಗಿ ಪದೇ ಪದೇ ಅರ್ಚನಾ ಅವರ ಜೊತೆ ಕಾರ್ಯಕರ್ತರು ಜಗಳ ಮಾಡುತ್ತಿದ್ದರು ಎಂದೂ ಹೇಳಲಾಗುತ್ತಿದೆ.