Saturday, December 10, 2022

Latest Posts

ಐತಿಹಾಸಿಕ ಜಂಬೂಸವಾರಿ: ಚಾಮುಂಡೇಶ್ವರಿಗೆ ಭಕ್ತಿ, ಶ್ರದ್ಧೆಯಿಂದ ನಮನ ಸಲ್ಲಿಸಿದ ಭಕ್ತಸಾಗರ!

ಹೊಸದಿಗಂತ ವರದಿ, ಮೈಸೂರು:

ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾದ ಕೊನೆ ದಿನದ ಆಕರ್ಷಣೆಯಾದ ಐತಿಹಾಸಿಕ ಜಂಬೂಸವಾರಿ ಅದ್ಧೂರಿಯಾಗಿ ವಿಜೃಂಭಣೆಯಿoದ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯಿತು.

ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿನ ಬೆನ್ನಿನ ಮೇಲಿದ್ದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಬಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಂದಿಧ್ವಜ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.

ಅವರಿಗೆ ಸಚಿವರಾದ ಸುನಿಲ್ ಕುಮಾರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್,ಮೇಯರ್ ಶಿವಕುಮಾರ್ ಸಾಥ್ ನೀಡಿದರು. ಬಳಿಕ ಗಜಪಡೆಯ ಹಿರಿಯ ನಾಯಕ ಅರ್ಜುನ್ ನಿಶಾನೆ ಆನೆಯಾಗಿ ಮಾರ್ಗ ತೋರಿಸುತ್ತಾ ಸಾಗಿದ. ಆತನ ಹಿಂದೆ ಭೀಮ, ಗೋಪಿ, ಧನಂಜಯ, ಮಹೇಂದ್ರ, ಗೋಪಾಲಸ್ವಾಮಿ ಆನೆಗಳು ನೌಪತ್ ಆನೆಗಳಾಗಿ ಸಾಗಿದವು.

ಮೆರವಣಿಗೆಯಲ್ಲಿ 53 ಜಾನಪದ ಕಲೆಗಳ ನೂರಾರು ಮಂದಿ ಕಲಾವಿದರು, ತಮ್ಮ ಕಲೆಗಳ ಪ್ರದರ್ಶನವನ್ನು ನೀಡುತ್ತಾ ಸಾಗಿದರು. ಕಲಾ ವೈಭವ ಮಾರ್ಗದ ಉದ್ದಕ್ಕೂ ಮೇಳೈಸಿತ್ತು. ಜಾನಪದ ಕಲೆಗಳ ಕಲರವ ಎಲ್ಲರ ಕಣ್ಮನ ಸೆಳೆಯಿತು. ಅದರ ನಡುವೆ 31 ಜಿಲ್ಲೆಗಳು ಸ್ತಬ್ದ ಚಿತ್ರಗಳು, ಅಲ್ಲಿನ ಐತಿಹಾಸಿಕ ಸ್ಥಳಗಳು, ಸಂಸ್ಕೃತಿ, ಪರಂಪರೆಯನ್ನು ಹೊತ್ತು ಸಾಗಿದವು.

ವಿವಿಧ ಇಲಾಖೆಗಳ 16 ಸ್ತಬ್ದ ಚಿತ್ರಗಳು ತಮ್ಮ ಕಾರ್ಯಕ್ರಮ, ಯೋಜನೆಗಳ ಕುರಿತ ಮಾಹಿತಿಯನ್ನು ಹೊತ್ತು ಸಾಗಿ ಎಲ್ಲರ ಮನ ಸೋರೆಗೊಂಡವು.

ಅವುಗಳನ್ನು ನೋಡಿ ಕಿಕ್ಕಿರಿದು ನೆರೆದಿದ್ದ ಲಕ್ಷಾಂತರ ಮಂದಿ ಕಣ್ತುಂಬಿಕೊoಡು, ಖುಷಿಯಾದರು. ಬಳಿಕಬಣ್ಣ, ಬಣ್ಣದ ಹೂವುಗಳಿಂದ ಅಲಂಕೃತಗೊoಡಿದ್ದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡಿ ಶಕ್ತಿ ದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ಗಣ್ಯರಿದ್ದ ವೇದಿಕೆಯ ಬಳಿಗೆ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಬಂದು ನಿಲ್ಲುತ್ತಿದ್ದಂತೆ ಸಂಜೆ 5.38ರ ವೇಳೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ, ಶ್ರದ್ಧಾ ಭಕ್ತಿಯಿಂದ ನಮಿಸಿದರು. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವ ಸುನಿಲ್ ಕುಮಾರ್, ಎಸ್.ಟಿ.ಸೋಮಶೇಖರ್, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಪುಷ್ಪಾರ್ಚನೆ ಮಾಡಿ, ಗೌರವ ವಂದನೆ ಸಲ್ಲಿಸಿದರು. ಈ ವೇಳೆ ಪೊಲೀಸ್ ಬ್ಯಾಂಡ್‌ನವರು ರಾಷ್ಟçಗೀತೆಯನ್ನು ನುಡಿಸಿದರು. ಬಳಿಕ ಫಿರಂಗಿಗಳಿoದ 21 ಬಾರಿ ಕುಶಾಲು ತೋಪು ಸಿಡಿಸಿ, ಗೌರವ ಸಲ್ಲಿಸಲಾಯಿತು. ಕ್ಯಾಪ್ಟನ್ ಅಭಿಮನ್ಯು ತನ್ನ ಸೊಂಡಿಲೆನ್ನೆತ್ತಿ ಗಣ್ಯರಿಗೆ ಗೌರವ ಸಲ್ಲಿಸಿದರು.

ಬಳಿಕ ಅಂಬಾರಿ ಹೊತ್ತು ರಾಜಗಾಂಭೀರ್ಯದಿoದ ಹೆಜ್ಜೆ ಹಾಕಿದ, ಆತನಿಗೆ ಕುಮ್ಕಿ ಆನೆಗಳಾದ ಕಾವೇರಿ ಮತ್ತು ಚೈತ್ರ ಸಾಥ್ ನೀಡಿದರು. ಜಂಬೂ ಸವಾರಿ ರಾಜ ಬೀದಿಗಳಾದ ಕೆ.ಆರ್ ಸರ್ಕಲ್ , ಸಯ್ಯಾಜಿರಾವ್ ರೋಡ್ ಆಯುರ್ವೇದಿಕ್ ವೃತ್ತ, ಆರ್ ಎಂಸಿ , ತಿಲಕ್ ನಗರದ ಮೂಲಕ ಜಗಮಗಿಸುತ್ತಿದ್ದ ವಿದ್ಯುತ್ ದೀಪಾಲಂಕಾರದ ನಡುವೆ ಸಾಗಿತು. ತಮ್ಮ ಮುಂದೆ ಬಂದ ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಗೆ ನೆರೆದಿದ್ದ ಲಕ್ಷಾಂತರ ಮಂದಿ ಶ್ರದ್ಧಾ ಭಕ್ತಿಯಿಂದ ನಮಿಸಿ, ತಾಯಿ ಚಾಮುಂಡೇಶ್ವರಿಗೆ ಜಯವಾಗಲಿ ಎಂದು ಜಯಘೋಷ ಮೊಳಗಿಸಿದರು.

ಐದು ಕಿ.ಮೀ ದೂರ ಸಾಗಿದ ಜಂಬೂಸವಾರಿ ಕೊನೆಗೆ ಬನ್ನಿಮಂಟಪಕ್ಕೆ ಬಂದು ತಲುಪಿದಾಗ ನೆರೆದಿದ್ದ ಜನರು ಚಪ್ಪಾಳೆ ತಟ್ಟುವ ಮೂಲಕ ಜಂಬೂಸವಾರಿ ಯಶಸ್ವಿಯಾಗಿದ್ದಕ್ಕೆ ತಮ್ಮ ಖುಷಿ, ಸಂತಸವನ್ನು ವ್ಯಕ್ತಪಡಿಸಿದರು. ಬಳಿಕ ಅಭಿಮನ್ಯು ಬೆನ್ನಿನ ಮೇಲಿದ್ದ ಚಿನ್ನದ ಅಂಬಾರಿಯನ್ನು ಕ್ರೇನ್ ಮೂಲಕ ಇಳಿಸಿ, ಅದರಲ್ಲಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ತೆಗೆದುಕೊಂಡು, ಎರಡನ್ನೂ ಬಿಗಿ ಪೊಲೀಸ್ ಬಂದೋ ಬಸ್ತ್ನಲ್ಲಿ ವಾಹನದಲ್ಲಿ ಅರಮನೆಗೆ ವಾಪಾಸ್ ತರಲಾಯಿತು.

ಗಜಪಡೆಗಳು ವಾಪಾಸ್ ಅರಮನೆಗೆ ಬಂದವು. ಮಾರ್ಗದ ಉದ್ದಕ್ಕೂ ಅವುಗಳು ಆಯಾಸಗೊಳ್ಳದಂತೆ ಪೌಷ್ಠಿಕ ಆಹಾರ, ಗ್ಲೂಕೋಸ್‌ನ್ನು ನೀಡಿ, ಸುಸ್ತು ಕಡಿಮೆಯಾಗುವಂತೆ ಮಾಡಲಾಯಿತು. ಬಳಿಕ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಟಾರ್ಚ್ ಲೈಡ್ ಪರೇಡ್ ನಡೆಯಿತು. ಲಕ್ಷಾಂತರ ಮಂದಿ ಅದನ್ನು ನೋಡಿ ಕಣ್ತುಂಬಿಕೊoಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!