ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಕಾಂಜಾವಾಲದಲ್ಲಿ ನಡೆದ ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದು ರಾತ್ರಿ ಕರ್ತವ್ಯದಲ್ಲಿದ್ದ 11 ಪೊಲೀಸ್ ಸಿಬ್ಬಂದಿಯನ್ನು ದೆಹಲಿ ಪೊಲೀಸರು ಅಮಾನತು ಮಾಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಪ್ರಕರಣದ ಕುರಿತು ದೆಹಲಿ ಪೊಲೀಸರ ನೀಡಿದ ವಿವರವಾದ ವರದಿಯನ್ನು ಆಧರಿಸಿ ಅಂದು ಮೂರು ಪಿಸಿಆರ್ ವ್ಯಾನ್ ಗಳಲ್ಲಿ ಮತ್ತು ಎರಡು ಪೊಲೀಸ್ ಪಿಕೆಟ್ಗಳಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡುವಂತೆ ಕೇಂದ್ರ ಗೃಹ ಸಚಿವಾಲಯ ಶಿಫಾರಸು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 1 ರಂದು ರಾತ್ರಿ ಅಂಜಲಿ ಸಿಂಗ್ ಎಂಬ ಯುವತಿ ಚಾಲನೆ ಮಾಡುತ್ತಿದ್ದ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿತ್ತು. ಕಾರಿನಡಿ ಸಿಕ್ಕಿದ ಅಂಜಲಿ ಸಿಂಗ್ ಅವರನ್ನು ಆರೋಪಿಗಳು 12 ಕಿ.ಮೀ.ವರೆಗೆ ಎಳೆದೊಯ್ದಿದ್ದರು. ಯುವತಿ ದೇಹದ ಮೇಲೆ 40 ಗಾಯಗಳಾಗಿತ್ತು ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ತೋರಿದ ರೋಹಿಣಿ ಜಿಲ್ಲೆಯ ಒಟ್ಟು 11 ಪೊಲೀಸರನ್ನು ಅಮಾನತುಗೊಳಿಸಲಾಗಿದೆ.