ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ವರ್ಲಿ ಪ್ರದೇಶದಲ್ಲಿ ಕಾರು ಗುದ್ದಿಸಿ ಮಹಿಳೆಯೊಬ್ಬರ ಸಾವಿಗೆ ಕಾರಣನಾದ ಆರೋಪಿ ಮೂರು ದಿನಗಳ ಬಳಿಕ ಅರೆಸ್ಟ್ ಆಗಿದ್ದಾನೆ.
ಪ್ರಮುಖ ಆರೋಪಿ ಮಿಹಿರ್ ಶಾ ಘಟನೆ ನಡೆದ ಬಳಿಕದಿಂದ ತಲೆ ಮರೆಸಿಕೊಂಡಿದ್ದ. ಮಂಗಳವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಮದ್ಯಪಾನ ಮಾಡಿ ಕಾರು ಚಲಾಯಿಸಿ ತನ್ನ ಬಿಎಂಡಬ್ಲ್ಯೂ ಕಾರನ್ನು ಸ್ಕೂಟರ್ ಗೆ ಡಿಕ್ಕಿ ಹೊಡೆಸಿದ್ದ ಆತ ಮಹಿಳೆಯನ್ನು ಸಾವಿಗೆ ಕಾರಣನಾಗಿದ್ದ. ಘಟನೆ ಜುಲೈ 7 ರಂದ ನಡೆದಿತ್ತು.
24 ವರ್ಷದ ಮಿಹಿರ್ ಏಕನಾಥ್ ಶಿಂಧೆ ಬಣದ ಶಿವಸೇನೆ ನಾಯಕ ರಾಜೇಶ್ ಶಾ ಅವರ ಪುತ್ರ. ರಾಜೇಶ್ ಶಾ ಅವರನ್ನು ವರ್ಲಿ ಪೊಲೀಸರು ಬಂಧಿಸಿದ್ದರು ಆದರೆ ಸೋಮವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಮಿಹಿರ್ ಜುಲೈ 7 ರಂದು ಮುಂಜಾನೆ ವೇಳೆ ವರ್ಲಿಯ ಅನ್ನಿ ಬೆಸೆಂಟ್ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಬಂದ ದಂಪತಿಗೆ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆಸಿದ್ದ. ಘಟನೆಯಲ್ಲಿ ಕಾವೇರಿ ನಖ್ವಾ ಎಂಬ ಮಹಿಳೆ ಮೃತಪಟ್ಟಿದ್ದು, ಆಕೆಯ ಪತಿ ಪ್ರದೀಪ್ ಗಾಯಗೊಂಡಿದ್ದಾರೆ.
ಬಿಎಂಡಬ್ಲ್ಯೂ ಕಾರನ್ನು ಮಿಹಿರ್ ಶಾ ಚಲಾಯಿಸುತ್ತಿದ್ದು, ಅವರ ಚಾಲಕ ರಾಜರ್ಷಿ ಬಿಡಾವತ್ ಅವರ ಪಕ್ಕದ ಪ್ಯಾಸೆಂಜರ್ ಸೀಟಿನಲ್ಲಿ ಕುಳಿತಿದ್ದರು. ನಂತರ ಕಾರನ್ನು ಬಾಂದ್ರಾ ಪೂರ್ವದ ಕಲಾ ನಗರದಲ್ಲಿ ಬಿಟ್ಟು ಹೋಗಿದ್ದರು.
ಮಿಹಿರ್ ಶಾ ವಿರುದ್ಧ ಭಾರತೀಯ ನ್ಯಾಯ ಸಾಹಿತ್ಯದ ಸೆಕ್ಷನ್ 105 (ಕೊಲೆಗೆ ಕಾರಣವಲ್ಲದ ನರಹತ್ಯೆ), 281 (ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ), 125-ಬಿ (ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ಅಪಾಯ), 238, 324 (4) (ನಷ್ಟ ಮತ್ತು ಹಾನಿ ಉಂಟುಮಾಡುವ ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184, 134 ಎ, 134 ಬಿ, 187 ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.