HMPV | ರಾಜ್ಯಾದಂತ ಹೈ ಆಲರ್ಟ್‌, ಸರ್ಕಾರದಿಂದ ಗೈಡ್‌ಲೈನ್ಸ್‌ ರಿಲೀಸ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಆರೋಗ್ಯ ಸಚಿವಾಲಯವು ಕರ್ನಾಟಕದಲ್ಲಿ ಎರಡು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಪ್ರಕರಣಗಳನ್ನು ದೃಢಪಡಿಸಿದ ಕೆಲವೇ ಗಂಟೆಗಳ ನಂತರ, ಅತ್ತ ಗುಜರಾತ್‌ನಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ.

ಇತ್ತ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಿದ್ದು, ಆರೋಗ್ಯ ಇಲಾಖೆ ಮುನ್ನಚ್ಚರಿಕೆ ಕ್ರಮವಾಗಿ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ.

ಇನ್ನೂ ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಹೊಸ ವೈರಸ್ ಕಂಡುಬಂದಿದ್ದು, ಹೆಚ್ಚಿನ ಮುಂಜಾಗೃತ ಕ್ರಮ ವಹಿಸಿಸಲು ಆರೋಗ್ಯ ಇಲಾಖೆ ಸೂಚಿಸಿದೆ.

ಪ್ರಮುಖವಾಗಿ ಶೀತಗಾಳಿ ಇರುವುದರಿಂದ ಮುನ್ನಚ್ಚರಿಕೆ ಕ್ರಮ ಅಗತ್ಯ ಎಂದು ಸೂಚನೆ ನೀಡಿದೆ.

ಎಚ್‌ಎಂಪಿವಿ ವೈರಸ್ ಚೀನಾದಲ್ಲಿ ವೇಗವಾಗಿ ಹರಡುತ್ತಿರುವುದನ್ನು ಮನಗಂಡು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆಯಿಂದ ಇರುವಂತೆ ಸಲಹೆಗಳನ್ನು ನೀಡಿದ ಬೆನ್ನಲ್ಲೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಜನರು ತಪ್ಪದೇ ಮಾರ್ಗಸೂಚಿಗಳನ್ನು ಪಾಲಿಸಲು ಸರ್ಕಾರ ಮನವಿ ಮಾಡಿದೆ.

  • ಜ್ವರ ಏನಾದರೂ ಇದ್ದರೆ ಜನನಿಬಿಡ ಪ್ರದೇಶಗಳಿಗೆ ತೆರಳದೇ ಮನೆಯಲ್ಲೇ ಉಳಿಯಿರಿ.
  • ಕೆಮ್ಮುವಾಗ ಮತ್ತು ಸೀನುವಾಗ ಕೈಗಳನ್ನು ಬಾಯಿಗೆ ಮತ್ತು ಮೂಗಿಗೆ ಅಡ್ಡ ಇಡಬೇಕು ಮತ್ತು ಕೈಗಳನ್ನು ಸ್ವಚ್ಛಗೊಳಿಸಬೇಕು.
  • ಆಗಾಗ ಕೈಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಬೇಕು ಮತ್ತು ಸ್ಯಾನಿಟೈಸರ್ ಅನ್ನು ತಪ್ಪದೇ ಬಳಸಬೇಕು.
  • ಸಾರ್ವಜನಿಕ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಉಗುಳಬಾರದು.
  • ನೆಗಡಿ, ಕೆಮ್ಮು ಕಾಣಿಸಿಕೊಂಡರೆ ಸ್ವಯಂ ಔಷಧಗಳನ್ನು ತೆಗೆದುಕೊಳ್ಳದೇ ತಕ್ಷಣ ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆದುಕೊಳ್ಳಬೇಕು.
  •  ಒಬ್ಬರು ಬಳಸಿದ ಬಟ್ಟೆ, ಟವಲ್ ಮತ್ತು ಕರ್ಚೀಫ್ ಅನ್ನು ಬಳಸಬಾರದು.
  •  ಪೌಷ್ಠಿಕ ಆಹಾರಗಳನ್ನು ತಪ್ಪದೇ ಸೇವಿಸಿ. ಆದಷ್ಟು ಜಂಕ್‌ ಫುಡ್‌ಗಳನ್ನು ತಪ್ಪಿಸಿ.
  • ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಚೆನ್ನಾಗಿ ಇಟ್ಟುಕೊಳ್ಳಿ.
  • ಆದಷ್ಟು ಜನರ ಗುಂಪಿನಿಂದ ದೂರವಿರಿ. ತೊಳೆಯದ ಕೈಗಳಿಂದ ನಿಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟುವುದನ್ನು ತಪ್ಪಿಸಿ.
  • ಇತರರೊಂದಿಗೆ ಏನಾದರೂ ಹಂಚಿಕೊಂಡು ತಿನ್ನುವುದನ್ನು ತಪ್ಪಿಸಿ.
  • ಮಕ್ಕಳು ಹಾಗೂ ಹಿರಿಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಹೊರಗಡೆ ಸುತ್ತಾಡುವುದನ್ನು ಕಡಿಮೆ ಮಾಡಿ.

ಚಳಿಗಾಲದಲ್ಲಿ ಉಸಿರಾಟದ ಸೋಂಕುಗಳು ಸಾಮಾನ್ಯವಾಗಿ ಹರಡುತ್ತವೆ. ಆದರೆ, ಕಳೆದ ಡಿಸೆಂಬರ್‌ಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಇದೆ.ಕೊರೋನಾಗೆ ಹೋಲಿಸಿದರೆ ಎಚ್‌ಎಂಪಿವಿ ಹೆಚ್ಚು ಪ್ರಭಾವಶಾಲಿಯಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಹೆಚ್ಚು ಆತಂಕಪಡುವ ಅಗತ್ಯವಿಲ್ಲ. ಹಾಗಂತೂ ನಿರ್ಲಕ್ಷ್ಯ ಧೋರಣೆ ಕೂಡ ಒಳ್ಳೆಯದಲ್ಲ.

2001ರಲ್ಲಿ ಪತ್ತೆಯಾದ ಡ್ಯೂಮನ್ ಮೆಟಾಪ್ಯೂಮೊವೈರಸ್ (HMPV), ನ್ಯುಮೊವಿರಿಡೆ ಕುಟುಂಬಕ್ಕೆ ಸೇರಿದ್ದು, ಇದು ಉಸಿರಾಟದ ಸಿನ್ಸಿಟಿಯಲ್ ವೈರಿಸ್ (RSV) ಅನ್ನು ಸಹ ಒಳಗೊಂಡಿದೆ. 2001 ರಲ್ಲಿ ಅಧಿಕೃತವಾಗಿ ಗುರುತಿಸಲ್ಪಟ್ಟಿದ್ದರೂ ಸಹ, HMPV ಮಾನವರಲ್ಲಿ 60 ವರ್ಷಗಳಿಂದ ಅಸ್ತಿತ್ವದಲ್ಲಿದೆ ಮತ್ತು ಪ್ರಪಂಚದಾದ್ಯಂತ ಕಂಡುಬರುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಈ ವೈರಸ್ ಎಲ್ಲ ವಯಸ್ಸಿನ ವ್ಯಕ್ತಿಗಳಲ್ಲಿ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೂ ಚಿಕ್ಕ ಮಕ್ಕಳು, ಹಿರಿಯರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಈ ವೈರಸ್‌ನ ಲಕ್ಷಣಗಳು ಯಾವುವೆಂದರೆ, ಕೆಮ್ಮು, ಜ್ವರ, ಮೂಗು ಕಟ್ಟುವುದು ಮತ್ತು ಉಸಿರಾಟದ ತೊಂದರೆ ಸೇರಿದಂತೆ ಇನ್ನಿತರ ಲಕ್ಷಣಗಳಿವೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!