ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದಲ್ಲಿ ಕಾಣಿಸಿಕೊಂಡಿರುವ ಹೆಚ್‌ಎಂಪಿವಿ ಎಂಬ (HMPV) ಹೊಸ ವೈರಸ್ ಮತ್ತಷ್ಟು ಆತಂಕಗೊಳಿಸಿದೆ. ಇನ್ನೂ ಈ ವೈರಸ್ ರಾಜ್ಯದಲ್ಲಿ ಕೂಡ ಕಾಣಿಸಿಕೊಂಡಿದ್ದು, ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಈ ಕುರಿತು ಇಂದು ಆರೋಗ್ಯ ಇಲಾಖೆ ಜೊತೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಈ HMPV ವೈರಸ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.
HMPV ವೈರಸ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ, ಇದು ಪ್ರಾಣಾಂತಿಕವಲ್ಲ. ಇದನ್ನು ಪರೀಕ್ಷೆ ಮಾಡುವ ಅಗತ್ಯವಿರುವುದಿಲ್ಲ. ಎಂದು ಆರೋಗ್ಯ ಇಲಾಖೆ ಜೊತೆಗಿನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಇಲಾಖಾವಾರು ಪ್ರಗತಿ ಪರಿಶೀಲನೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯನವರು, ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ. ರಾಜ್ಯದಲ್ಲಿ ತಾಯಂದಿರ ಮರಣ ಅನುಪಾತ ದೇಶಕ್ಕೆ ಹೋಲಿಸಿದರೆ ಕಡಿಮೆಯಿದೆ. 2018-20ರ ಅವಧಿಯಲ್ಲಿ ರಾಜ್ಯದಲ್ಲಿ ಒಂದು ಲಕ್ಷಕ್ಕೆ 69 ಮರಣ ಸಂಭವಿಸುತ್ತಿತಿದ್ದು ದೇಶದ ಅನುಪಾತ 97 ಇದೆ. 2022-24ರ ಅವಧಿಯಲ್ಲಿ ರಾಜ್ಯದಲ್ಲಿ ಇದರ ಪ್ರಮಾಣ 55 ಕ್ಕೆ ಇಳಿದಿದೆ. ಆದ್ರೆ, ತಾಯಂದಿರ ಮರಣವನ್ನು ಶೂನ್ಯಕ್ಕೆ ಇಳಿಸಲು ವ್ಯಾಪಕ ಅಭಿಯಾನ ಆರಂಭಿಸಬೇಕು ಎಂದು ಸೂಚನೆ ನೀಡಿದರು.
ತಾಯಂದಿರ ಮರಣ ಪ್ರಮಾಣ ಕಡಿಮೆ ಮಾಡಲು ಸೂಚನೆ
ತಾಯಂದಿರ ಮರಣ ತಡೆಗಟ್ಟಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಹೆರಿಗೆ ಪ್ರಮಾಣಕ್ಕೆ ಅನುಗುಣವಾಗಿ ಆಸ್ಪತ್ರೆಗಳಲ್ಲಿ ಪ್ರಸೂತಿ ತಜ್ಞರು ಮತ್ತು ಅರವಳಿಕೆ ತಜ್ಞರನ್ನು ನೇಮಕ ಮಾಡಬೇಕು. ಇದಕ್ಕಾಗಿ ಕಡಿಮೆ ಹೆರಿಗೆ ಪ್ರಮಾಣವಿರುವ ಆಸ್ಪತ್ರೆಗಳ ವೈದ್ಯಾಧಿಕಾರಿಗಳನ್ನು ಪುನರ್ ನಿಯೋಜನೆ ಮಾಡಬೇಕು ಎಂದು ಕರೆ ನೀಡಿದರು.
ಆಸ್ಪತ್ರೆಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ
ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯಾಧಿಕಾರಿಗಳ ಲಭ್ಯತೆಯನ್ನು ಖಾತ್ರಿಪಡಿಸಬೇಕು. ಔಷಧಿ ಖರೀದಿ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವಿಳಂಬ ಮಾಡಬಾರದು. ಹೆಣ್ಣು ಭ್ರೂಣ ಹತ್ಯೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಎಲ್ಲಾ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಆಸ್ಪತ್ರೆಗಳಲ್ಲಿ ಸ್ವಚ್ಛತೆ, ಅಗತ್ಯ ಮೂಲಸೌಕರ್ಯಗಳ ನಿರ್ವಹಣೆಗೆ ವ್ಯವಸ್ಥೆ ಮಾಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಖಾತ್ರಿಪಡಿಸಿದರೆ ಮಾತ್ರ ಜನರ ಖಾಸಗಿ ಆಸ್ಪತ್ರೆಗಳ ಅವಲಂಬನೆ ಕಡಿಮೆ ಮಾಡಬಹುದು ಎಂದು ಹೇಳಿದರು.