ಭಾರತಕ್ಕೆ HMPV ವೈರಸ್ ಲಗ್ಗೆ: ಹೆಚ್ಚುತ್ತಿದೆ ಆತಂಕ, ಯಾರಿಗೆಲ್ಲಾ ಅಪಾಯ? ಅರೋಗ್ಯ ಇಲಾಖೆ ಏನು ಹೇಳುತ್ತೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಎರಡು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಪ್ರಕರಣಗಳನ್ನು ದೃಢಪಡಿಸಿದ ಕೆಲವೇ ಗಂಟೆಗಳ ನಂತರ, ಅತ್ತ ಗುಜರಾತ್‌ನಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಪ್ರಕಾರ, ಗುಜರಾತ್‌ನಲ್ಲಿ ಇದು ಮೊದಲ ಎಚ್‌ಎಂಪಿವಿ ಪ್ರಕರಣವಾಗಿದೆ. ಸುಮಾರು 2 ವರ್ಷ ವಯಸ್ಸಿನ ಮಗುವಿನಲ್ಲಿ HMPV ವೈರಸ್ ಪತ್ತೆಯಾಗಿದೆ. ರೋಗಿಯನ್ನು ಅಹಮದಾಬಾದ್‌ನ ಚಂದ್‌ಖೇಡಾ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರ್ನಾಟಕದ HMPV ವೈರಸ್ ಪತ್ತೆಯಾಗಿದ ಎರಡು ಪ್ರಕರಣಗಳಲ್ಲಿ ಒಂದು ಮೂರು ತಿಂಗಳ ಹೆಣ್ಣು ಮಗು ಮತ್ತು ಎಂಟು ತಿಂಗಳ ಗಂಡು ಸೇರಿದ್ದು, ಇಬ್ಬರನ್ನೂ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ಕಾಯಿಲೆಗಳನ್ನು ಮೇಲ್ವಿಚಾರಣೆ ಮಾಡುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮೂಲಕ ಈ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

ಗುಜರಾತ್ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ ಅತುಲ್ ಗೋಯೆಲ್ ಅವರು, HMPV ವೈರಸ್ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆತಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

HMPV ಇತರ ಉಸಿರಾಟದ ವೈರಸ್‌ಗಳಿಗೆ ಹೋಲುತ್ತದೆ, ಸಾಮಾನ್ಯವಾಗಿ ಶೀತದಂತಹ ಸೌಮ್ಯ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ ಅತುಲ್ ಗೋಯೆಲ್ ವಿವರಿಸಿದ್ದು, ಇದು ಚಿಕ್ಕ ಮಕ್ಕಳಲ್ಲಿ ಅಥವಾ ವಯಸ್ಸಾದ ವ್ಯಕ್ತಿಗಳಲ್ಲಿ ಹೆಚ್ಚು ತೀವ್ರವಾದ ಜ್ವರ ತರಹದ ರೋಗಲಕ್ಷಣಗಳಿಗೆ ಕಾರಣವಾಗಬಹುದು. ಸೋಂಕುಗಳು ಹರಡುವುದನ್ನು ತಡೆಯಲು, ವಿಶೇಷವಾಗಿ ಚಳಿಗಾಲದಲ್ಲಿ, ಆಗಾಗ್ಗೆ ಕೈ ತೊಳೆಯುವುದು ಮತ್ತು ಮುಖಗವಸುಗಳನ್ನು ಧರಿಸುವುದು ಮುಂತಾದ ಮೂಲಭೂತ ನೈರ್ಮಲ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

HMPV ಸೋಂಕು ಲಕ್ಷಣವೇನು?
HMPV ಸಾಮಾನ್ಯವಾಗಿ ಸಾಮಾನ್ಯ ಶೀತವನ್ನು ಹೋಲುವ ಸಾದಾ ಉಸಿರಾಟದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಇದರ ಸಾಮಾನ್ಯ ಲಕ್ಷಣಗಳು ಕೆಮ್ಮು, ಮೂಗಿನಲ್ಲಿ ನೀರಿಳಿಯುವಿಕೆ ಅಥವಾ ಮೂಗು ಕಟ್ಟುವುದು, ನೋಯುತ್ತಿರುವ ಗಂಟಲು ಮತ್ತು ಜ್ವರ ಕಂಡು ಬರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ವ್ಯಕ್ತಿಗಳು ಮೂಲಭೂತ ಆರೈಕೆಯೊಂದಿಗೆ ಚೇತರಿಸಿಕೊಳ್ಳುತ್ತಾರೆ.

ಆದರೆ, ಹೆಚ್ಚು ತೀವ್ರತರವಾದ ಪ್ರಕರಣಗಳಲ್ಲಿ, ವಿಶೇಷವಾಗಿ ಚಿಕ್ಕ ಮಕ್ಕಳು, ವಯಸ್ಸಾದವರು ಅಥವಾ ಮೊದಲೇ ಅನಾರೋಗ್ಯ ಇರುವಂತಹ ಜನರು ಹೆಚ್ಚಿನ ಅಪಾಯದ ಗುಂಪುಗಳಲ್ಲಿ ಕಂಡುಬಂದು, ಅವರಲ್ಲಿ ರೋಗಲಕ್ಷಣಗಳು ಉಲ್ಬಣಗೊಳ್ಳಬಹುದು. ಇವುಗಳಲ್ಲಿ ಉಬ್ಬಸ, ಉಸಿರಾಟದ ತೊಂದರೆ ಮತ್ತು ಆಸ್ತಮಾದ ಉಲ್ಬಣವು ಒಳಗೊಂಡಿರಬಹುದು.

HMPV ಸಾಮಾನ್ಯವಾಗಿ ಭಯಪಡುವಂತಹ ಕಾಯಿಲೆ ಅಲ್ಲವಾದರೂ, ತೀವ್ರತರವಾದ ರೋಗಲಕ್ಷಣಗಳನ್ನು ಅನುಭವಿಸುತ್ತಿರುವ ವ್ಯಕ್ತಿಗಳು ತಕ್ಷಣವೇ ವೈದ್ಯಕೀಯ ಸಲಹೆಯನ್ನು ಪಡೆಯುವುದು ಮುಖ್ಯವಾಗಿದೆ.

ಏನು ಮಾಡಬೇಕು?
ಕೆಮ್ಮುವಾಗ, ಸೀನುವಾಗ ಕರ್ಚೀಫ್/ಟಿಶ್ಯೂ ಪೇಪರ್ ಬಳಸಬೇಕು
ಆಗಾಗ ಸೋಪು, ನೀರು, ಸ್ಯಾನಿಟೈಸರ್​ನಿಂದ ಕೈಗಳನ್ನ ತೊಳೆಯಿರಿ
ಹೆಚ್ಚು ಜನ ದಟ್ಟಣೆ ಇರುವ ಪ್ರದೇಶಗಳಲ್ಲಿ ಓಡಾಟ ಕಡಿಮೆ ಮಾಡಿ
ಜ್ವರ, ಕೆಮ್ಮು, ಶೀತವಿದ್ದಲ್ಲಿ ಸಾರ್ವಜನಿಕ ಸ್ಥಳಗಳಿಗೆ ಹೋಗಬೇಡಿ
ಸೋಂಕು ಹರಡುವಿಕೆ ತಡೆಯಲು ಗಾಳಿ ಇರುವ ಪ್ರದೇಶಗಳಲ್ಲಿರಿ
ಅನಾರೋಗ್ಯವಿದ್ದಲ್ಲಿ ಮನೆಯಲ್ಲೇ ಇರಿ, ಇತರರ ಜೊತೆ ಸಂಪರ್ಕ ಬೇಡ
ಪೌಷ್ಠಿಕ ಆಹಾರವನ್ನ ಸೇವಿಸಿ, ಯಥೇಚ್ಛವಾಗಿ ನೀರು ಕುಡಿಯಿರಿ

ಏನು ಮಾಡಬಾರದು?
ಅದೇ ಕರ್ಚೀಫ್ ಹಾಗೂ ಟಿಶ್ಯೂ ಪೇಪರ್​ನ ಮರುಬಳಕೆ ಬೇಡ
ಅನಾರೋಗ್ಯ ಪೀಡಿತರ ಜೊತೆ ಸಂಪರ್ಕದಲ್ಲಿರುವುದು ಬೇಡ
ಅವರು ಬಳಸಿದ ಟವೆಲ್, ಬಟ್ಟೆಗಳನ್ನ ಬಳಸಬಾರದು
ಪದೇ ಪದೆ ಕಣ್ಣು, ಮೂಗು, ಬಾಯಿಯನ್ನ ಮುಟ್ಟಿಕೊಳ್ಳಬಾರದು
ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು
ವೈದ್ಯರನ್ನ ಸಂಪರ್ಕಿಸದೇ ಸ್ವಯಂ ಔಷಧಿ ತೆಗೆದುಕೊಳ್ಳಬೇಡಿ

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!