ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಅನ್ವಯಿಸುವ ವಿಚಾರದಲ್ಲಿ ಸರ್ಕಾರ ಸ್ಪಷ್ಟತೆ ನೀಡಬೇಕು ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸಿ ನಂತರವೇ ನೇಮಕಾತಿ ಪ್ರಕ್ರಿಯೆ ಮುಂದುವರಿಸಬೇಕು ಎಂದು ಹೇಳಿದರು.
ಇದನ್ನೂ ಓದಿ:
ಬಾಕಿ ಉಳಿದಿರುವ ನೇಮಕಾತಿಗಳ ಬಗ್ಗೆ ಸರ್ಕಾರ ಅನುಸರಿಸುವ ಕಾರ್ಯವಿಧಾನವನ್ನು ಬಹಿರಂಗಪಡಿಸಬೇಕು. ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಗೆ ವಿವಿಧ ಸಮುದಾಯಗಳು ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಅದರ ಶಿಫಾರಸುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು. ಕಾನೂನು ತಜ್ಞರ ಸಲಹೆ ಪಡೆದು ಗೊಂದಲ ನಿವಾರಣೆ ಮಾಡಬೇಕೆಂದು ಸೂಚಿಸಿದರು.
ಇದೇ ವೇಳೆ ಇಸ್ರೇಲ್–ಇರಾನ್ ಸಂಘರ್ಷದ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ಯುದ್ಧ ತೀವ್ರಗೊಳ್ಳುವ ಮುನ್ನ ಜಾಗತಿಕ ನಾಯಕರು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದರು. ಪಶ್ಚಿಮ ಏಷ್ಯಾದ ದುಬೈ, ಅಬುಧಾಬಿ, ಸೌದಿ ಅರೇಬಿಯಾ ಭಾಗಗಳಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವುದರಿಂದ ಪರಿಸ್ಥಿತಿಯ ಮೇಲೆ ಕಳವಳ ಇದೆ ಎಂದು ಹೇಳಿದರು.



