Sunday, October 1, 2023

Latest Posts

ಸಗಣಿಯ ಹೋಳಿ ಎಲ್ಲಾದರೂ ನೋಡಿದ್ದೀರಾ? – ಗದಗದಲ್ಲೊಂದು ವಿಶಿಷ್ಟ ಆಚರಣೆ

ವೆಂಕಟೇಶ ಬಿ.ಇಮರಾಪೂರ

ಗದಗ: ರಂಗಪಂಚಮಿಯಲ್ಲಿ ಬಣ್ಣದೋಕುಳಿಯ ಆಟವನ್ನು ನೋಡಿದ್ದೆವೆ. ಆದರೆ, ಸಗಣಿ ಎಂದು ಮುಖ ತಿರುಚುವ ಈ ದಿನಗಳಲ್ಲಿ ಯುವಕರು ಅದನ್ನು ಬಣ್ಣದಂತೆ ಪರಸ್ಪರ ಎರಚುತ್ತ ವಿಶಿಷ್ಠ ಆಚರಣೆಯೊಂದಿಗೆ ಸಂಭ್ರಮಿಸುವ ಸಗಣಿ ಆಟವನ್ನು ನೋಡಬೇಕಾದರೆ ನೀವು ನಾಗಪಂಚಮಿ ಮರುದಿನ ಗದಗದ ಗಂಗಾಪುರಪೇಟೆಗೆ ಬರಲೇ ಬೇಕು.

ನಾಗರಪಂಚಮಿ ಹಬ್ಬದಂದು ಹುತ್ತಕ್ಕೆ ಹಾಲೆರೆಯುವುದು, ನಾಗದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವುದು ಸೇರಿದಂತೆ ಅನೇಕ ಆಚರಣೆಗಳನ್ನು ಮಾಡುವುದನ್ನು ನೋಡಿದ್ದೇವೆ. ಆದರೆ, ನಗರದ ಗಂಗಾಪುರಪೇಟೆಯಲ್ಲಿ ನಾಗರಪಂಚಮಿಯ ಮಾರನೇ ದಿನವಾದ ಕರೆಕಟ್ಟಂಬಲಿ ದಿನದಂದು ಇದೆಲ್ಲಕ್ಕಿಂತ ವಿಶಿಷ್ಟವಾದ ಸಗಣಿ ಎರಚುವ ಆಟ ಪ್ರತಿ ವರ್ಷ ನಡೆಯುತ್ತದೆ.

ಈ ಸಗಣಿ ಆಟಕ್ಕೆ ಸಗಣಿ ಸಂಗ್ರಹಿಸಲು ತಿಂಗಳುಗಳಿಂದ ಪೂರ್ವಭಾವಿ ಸಂಗ್ರಹಣೆ ಕೆಲಸ ನಡೆದಿರುತ್ತದೆ. ನಗರದ ಯುವಕರು ದನಕರುಗಳಿರುವ ಮನೆಗಳಿಗೆ ತೆರಳಿ ಸಗಣಿ ಸಂಗ್ರಹಿಸುತ್ತಾರೆ. ನಾಗರಪಂಚಮಿ ಮಾರನೇ ದಿನ ಈ ಸಗಣಿ ಎರಚುವ ಆಟದಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಸುಮಾರು ಒಂದರಿಂದ ಎರಡು ಗಂಟೆವರೆಗೆ ನಡೆಯುವ ಸಗಣಿ ಹೋಳಿಹುಣ್ಣಿಮೆಯ ಆಟ ನೋಡಿದರೆ ರಂಗಿನಾಟ ನೆನಪಿಗೆ ಬರುವುದಂತೂ ಸತ್ಯ. ಸಗಣಿಯನ್ನು ಬಣ್ಣದಂತೆ ಪರಸ್ಪರ ಎರಚುವುದು ತಲೆತಲಾಂತರದಿಂದ ನಡೆದುಕೊಂಡು ಬಂದ ಪದ್ಧತಿಯಾಗಿದೆ.

ಓಣಿಯ ಮುಖ್ಯರಸ್ತೆಯಲ್ಲಿ ಸುಮಾರು 30 ಸಗಣಿಯ ಗುಂಪುಗಳನ್ನು ಹಾಕಿ ಅವುಗಳ ಮೇಲೆ ವಿವಿಧ ಬಣ್ಣಗಳನ್ನು ಹಾಕುತ್ತಾರೆ ಹಾಗೂ 12 ರಿಂದ 16 ಯುವಕರು ಎರಡು ತಂಡಗಳನ್ನು ರಚಿಸಿ ಹತ್ತಿರದಲ್ಲಿರುವ ದೈವದವರ ತೋಟದಲ್ಲಿ ಸಗಣಿ ಆಟಕ್ಕೆ ಸಿದ್ಧರಾಗಲು ವಿವಿಧ ಬಟ್ಟೆ ತೊಡುತ್ತಾರೆ. ಅದರಲ್ಲಿ ವಿಶೇಷವಾಗಿ ಬದನೆಕಾಯಿ, ಸೌತೆಕಾಯಿ, ಈರುಳ್ಳಿ, ಹಿರೇಕಾಯಿ, ಟೊಮೆಟೊ, ಸೇರಿದಂತೆ ವಿವಿಧ ತರಕಾರಿಗಳ ಹಾರವನ್ನಾಗಿ ಮಾಡಿಕೊಂಡು ಕೊರಳಲ್ಲಿ ಧರಿಸುತ್ತಾರೆ.

ಅಲ್ಲದೆ, ವಿವಿಧ ವೇಶಭೂಷಣಗಳೊಂದಿಗೆ ಕಣಕ್ಕೆ ಬರುತ್ತಾರೆ. ಈ ಎರಡು ತಂಡಗಳಲ್ಲಿ ಪುರುಷರು ಮಹಿಳೆಯರ ಉಡುಪು ತೊಟ್ಟು ಆಕರ್ಷಿಸುತ್ತಾರೆ. ನಂತರ ತಮ್ಮ ತಂಡದೊಂದಿಗೆ ನಗರದಲ್ಲಿರುವ ದುರ್ಗಾದೇವಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಎಲ್ಲರೂ ತೆರಳಿ ಅಲ್ಲಿ ಪೂಜೆ ಸಲ್ಲಿಸುತ್ತಾರೆ. ಅಲ್ಲಿಂದ ಆಗಮಿಸಿದ ನಂತರ ಪರಸ್ಪರ ಸಗಣಿ ಎರಚುವ ಆಟದಲ್ಲಿ ತೊಡಗುತ್ತಾರೆ.

ಈ ಆಟದಲ್ಲಿ ಎದುರುಬದುರಾಗಿ ರಸ್ತೆಯುದ್ದಕ್ಕೂ ಓಡಾಡುವುದರಿಂದ ಅವರ ಮೈತುಂಬ ಸಗಣಿ ಮೆತ್ತಿಕೊಂಡಿರುತ್ತದೆ. ಇದ್ಯಾವುದನ್ನು ಲೆಕ್ಕಿಸದೆ ಎದುರಾಳಿಗೆ ಸಗಣಿಯನ್ನು ಎರಚಿ ಸಂತಸ ಪಡುತ್ತಾರೆ.

ಕೀಳರಿಮೆ ತೊರೆಯಲು ಸಗಣಿ ಆಟ !

ಈ ಆಟಕ್ಕೆ ಇಂದಿನ ಹಿರಿಯರು ಹೇಳುವಂತೆ ರೈತ ಸಮುದಾಯ ಸಗಣಿಗೆ ಬಂಗಾರದ ಸ್ಥಾನಮಾನ ನೀಡುತ್ತಾರೆ. ಹಾಗಾಗಿ ಬಂಗಾರವನ್ನು ಅಲ್ಲಗಳೆಯಬಾರದು, ಪಾವಿತ್ರತೆಯಿಂದ ಕೂಡಿದ ಸಗಣಿಯನ್ನು ಕೀಳರಮೆಯಿಂದ ಕಾಣದೆ ಬಣ್ಣದಾಟದಂತೆ ಆಡುತ್ತಾರೆ. ಅಲ್ಲದೇ, ಸಗಣಿಯನ್ನು ಮೈಮೇಲೆ ಹಾಕಿಕೊಳ್ಳುವುದರಿಂದ ಚರ್ಮರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಈ ಆಟವನ್ನು ನೋಡಲು ಜನರು ರಸ್ತೆ ಅಕ್ಕಪಕ್ಕದಲ್ಲಿ ಕಿಕ್ಕಿರಿದು ತುಂಬಿರುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!