ತಲಕಾವೇರಿಯಲ್ಲಿ ಪವಿತ್ರ ತೀರ್ಥೋಧ್ಬವ: ಭಕ್ತರಿಗೆ ಮುಕ್ತ ಅವಕಾಶಕ್ಕೆ ಶಾಸಕರ ಸಲಹೆ

ಹೊಸದಿಗಂತ ವರದಿ ಮಡಿಕೇರಿ: 

ನಾಡಿನ ಜೀವನದಿ, ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಅಕ್ಟೋಬರ್ 17 ರಂದು ರಾತ್ರಿ 7.21 ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ ಪವಿತ್ರ ತೀರ್ಥೋಧ್ಬವ ಸಂಭವಿಸಲಿದ್ದು, ಈ ಸಂದರ್ಭ
ಎಲ್ಲಾ ಭಕ್ತಾದಿಗಳಿಗೂ ಅವಕಾಶ ಮಾಡಬೇಕು. ಯಾವುದೇ ನಿರ್ಬಂಧ ಇರಬಾರದು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಸಲಹೆ ನೀಡಿದರು.

ನಗರದ ಜಿ.ಪಂ.ಭವನದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ತಲಕಾವೇರಿ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಂದರ್ಭ ಮಶತನಾಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್ ಅವರು, ತಲಕಾವೇರಿಯಲ್ಲಿ ವಾಹನ ನಿಲುಗಡೆಗೆ ಇರುವ ಸ್ಥಳಾವಕಾಶ ನೋಡಿಕೊಂಡು ಅವಕಾಶ ಮಾಡಲಾಗುವುದು. ಉಳಿದಂತೆ ಬಸ್ ಮೂಲಕ ಸಂಚಾರ ಮಾಡಬಹುದಾಗಿದೆ ಎಂದರು.

ಭಾಗಮಂಡಲ ತಲಕಾವೇರಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮನುಮುತ್ತಪ್ಪ ಅವರು ಮಾತನಾಡಿ, ತಲಕಾವೇರಿಯಲ್ಲಿ ವಾಹನ ನಿಲುಗಡೆ ಸಂಬಂಧಿಸಿದಂತೆ ಹಿಂದೆ ನೀಲನಕಾಶೆ ತಯಾರಿಸಲಾಗಿದ್ದು, ಅದನ್ನು ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಭಾಗಮಂಡಲ ಗ್ರಾ.ಪಂ.ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಅವರು ಮಾತನಾಡಿ ಗ್ರಾ.ಪಂ.ವತಿಯಿಂದ ಸ್ವಚ್ಛತೆ ಹಾಗೂ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮವಹಿಸಲಾಗುವುದು. ಪರವಾನಗಿ ಇರುವ ಖಾಸಗಿ ಬಸ್‍ಗಳ ಸಂಚಾರಕ್ಕೆ ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು.
ಭಾಗಮಂಡಲ-ತಲಕಾವೇರಿ,ಮಡಿಕೇರಿ-ಭಾಗಮಂಡ, ಕಡಂಗ-ಭಾಗಮಂಡಲ ಮತ್ತು ಭಾಗಮಂಡಲ-ಕರಿಕೆ ರಸ್ತೆಯಲ್ಲಿ ಗಿಡಗಳನ್ನು ಕಡಿಯುವಂತಾಗಬೇಕು ಎಂದೂ ಅವರು ಕೋರಿದರು.

ಮರಗಳ ತೆರವಿಗೆ ಸೂಚನೆ: ಈ ಬಗ್ಗೆ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಅವರು ಅರಣ್ಯ ಇಲಾಖೆಯವರು ಭಾಗಮಂಡಲ ಕರಿಕೆ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದರು. ಉಳಿದಂತೆ ಗಿಡಗಳನ್ನು ಕಡಿಯುವಂತೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್’ಗೆ ಅವರು ನಿರ್ದೇಶನ ನೀಡಿದರು.
ತಲಕಾವೇರಿ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಬರುವುದರಿಂದ ವಾಹನ ನಿಲುಗಡೆ ಸೇರಿದಂತೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕಷ್ಟವಾಗುತ್ತದೆ ಎಂದು ಮಾಹಿತಿ ನೀಡಿದರು.
ಭಕ್ತರೊಬ್ಬರು ಮಾತನಾಡಿ, ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋಧ್ಬವ ಸಂದರ್ಭ ಭಕ್ತಾಧಿಗಳು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ದೀಪದೊಂದಿಗೆ ತೆರಳುತ್ತಾರೆ. ಇಂತಹ ಭಕ್ತಾದಿಗಳಿಗೆ ಕಿರಿಕಿರಿ ಉಂಟುಮಾಡಬಾರದು ಎಂದರು.
ಎಂ.ಬಿ.ದೇವಯ್ಯ ಅವರು ಮಾತನಾಡಿ ಭಕ್ತಾದಿಗಳಿಗೆ ತೊಂದರೆ ನೀಡಬಾರದು. ವಾಹನ ಪಾಸನ್ನು ನೀಡಬೇಕು ಎಂದು ಕೋರಿದರು.

ಸಾಲಾಗಿ ಕಳುಹಿಸಿ: ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ತಲಕಾವೇರಿಯ ಕೊಳದ ಬಳಿಗೆ ಭಕ್ತಾದಿಗಳನ್ನು ಸಾಲಾಗಿ ಕಳುಹಿಸುವಂತಾಗಬೇಕು ಎಂದು ಸಲಹೆ ಮಾಡಿದರು.
ಅಪರ ಜಿಲ್ಲಾಧಿಕಾರಿ ಹಾಗೂ ಭಾಗಮಂಡಲ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳ ಆಡಳಿತಾಧಿಕಾರಿ ಡಾ.ನಂಜುಂಡೇಗೌಡ ಅವರು ಸೆಪ್ಟೆಂಬರ್ 27 ರಂದು ಬೆಳಗ್ಗೆ 11.05 ನಿಮಿಷಕ್ಕೆ ಸಲ್ಲುವ ವೃಚ್ಛಿಕ ಲಗ್ನದಲ್ಲಿ “ಪತ್ತಾಯಕ್ಕೆ ಅಕ್ಕಿ ಹಾಕುವುದು”, ಅಕ್ಟೋಬರ್ 5 ರಂದು ಬೆಳಗ್ಗೆ 09.35 ನಿಮಿಷಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ “ಆಜ್ಞಾ ಮುಹೂರ್ತ”. ಅಕ್ಟೋಬರ್ 15 ರಂದು ಬೆಳಗ್ಗೆ 11.45 ನಿಮಿಷಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ “ಅಕ್ಷಯ ಪಾತ್ರೆ ಇರಿಸುವುದು” ಮತ್ತು 04.15 ನಿಮಿಷಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ “ಕಾಣಿಕೆ ಡಬ್ಬಿಗಳನ್ನು ಇಡುವುದು”. ಅಕ್ಟೋಬರ್ 17 ರ ಸೋಮವಾರ ರಾತ್ರಿ 07.21 ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ “ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ” ಜರುಗಲಿದೆ ಎಂದು ಮಾಹಿತಿ ನೀಡಿದರು.

ಭಾಗಮಂಡಲ ಶ್ರೀಭಗಂಡೇಶ್ವರ-ತಲಕಾವೇರಿ ದೇವಾಲಯಗಳ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಲೋಕೋಪಯೋಗಿ ಇಲಾಖೆಯ ಇಇ ನಾಗರಾಜು, ಸೆಸ್ಕ್ ಇಇ ಅನಿತಾ ಬಾಯಿ ಅವರು ಹಲವು ಮಾಹಿತಿ ನೀಡಿದರು.

ಜೀವ ವೈವಿಧ್ಯ ಮಂಡಳಿ ರಾಜ್ಯ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!