ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಅನಿಮೇಷನ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆಯುವ ಕೆಲಸವನ್ನು ಹೊಂಬಾಳೆ ಬ್ಯಾನರ್‌ನ ಮಹಾವತಾರ್ ನರಸಿಂಹ ಮಾಡಿದೆ. ಬಿಡುಗಡೆ ಆದ ಕೆಲ ತಿಂಗಳಲ್ಲೇ ಈ ಸಿನಿಮಾ 300 ಕೋಟಿಗಿಂತ ಹೆಚ್ಚು ಸಂಗ್ರಹಿಸಿ, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಈಗ ಈ ಸಿನಿಮಾ 98ನೇ ಆಸ್ಕರ್ ಅಕಾಡೆಮಿ ಅವಾರ್ಡ್‌ಗಳಿಗೆ ಅಧಿಕೃತವಾಗಿ ಎಂಟ್ರಿ ಪಡೆದಿದೆ.
ಜುಲೈ 25ರಂದು ಯಾವುದೇ ದೊಡ್ಡ ನಿರೀಕ್ಷೆಗಳಿಲ್ಲದೆ ಬಿಡುಗಡೆಯಾದ ಈ ಸಿನಿಮಾ, ತನ್ನ ವಿಶಿಷ್ಟ ವಿಷಯ ಮತ್ತು ಬಾಯಿಂದ ಬಾಯಿಗೆ ಹರಿದ ಪ್ರಶಂಸೆಯಿಂದ ಬಾಕ್ಸ್ ಆಫೀಸ್‌ನಲ್ಲಿ ಅಚ್ಚರಿ ಮೂಡಿಸಿತು.
ಕೇವಲ 15 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿತವಾಗಿದ್ದರೂ, ಮಹಾವತಾರ್ ನರಸಿಂಹ ವಿಶ್ವಾದ್ಯಂತ 320 ಕೋಟಿ ರೂ. ಸಂಗ್ರಹಿಸಿ ಭಾರತದ ಅತ್ಯಧಿಕ ಗಳಿಕೆಯ ಅನಿಮೇಟೆಡ್ ಚಿತ್ರ ಎಂಬ ದಾಖಲೆ ನಿರ್ಮಿಸಿದೆ. ವಿಷ್ಣುವಿನ ನರಸಿಂಹ ಅವತಾರವನ್ನು ಆಧರಿಸಿದ ಕಥಾಹಂದರ, ತಾಂತ್ರಿಕ ಗುಣಮಟ್ಟ, ಭಾವುಕ ಸಂಗೀತ ಎಲ್ಲವು ಪ್ರೇಕ್ಷಕರ ಮನ ಗೆದ್ದಿದೆ. ಪ್ರಸ್ತುತ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
98ನೇ ಆಸ್ಕರ್ ಅಕಾಡೆಮಿ ಅವಾರ್ಡ್‌ಗಳಿಗೆ ಅಧಿಕೃತವಾಗಿ ಎಂಟ್ರಿ ಪಡೆದಿರುವ ಈ ಸಿನಿಮಾ ಅನಿಮೇಟೆಡ್ ವಿಭಾಗದಲ್ಲಿ ಭಾರತದ ಪರವಾಗಿ ಸ್ಪರ್ಧಿಸಲಿದೆ. ದೇಶದ ಅನಿಮೇಷನ್ ಕ್ಷೇತ್ರಕ್ಕೆ ಜಾಗತಿಕ ವೇದಿಕೆಯ ಗೌರವವನ್ನೂ ತಂದಿದೆ.

