ಮನೆಪಾಠದಿಂದ ಮಂಗಳಗಟ್ಟಿ ಚಿತ್ರಣವೇ ಬದಲು!

– ನಿತೀಶ ಡಂಬಳ, ಧಾರವಾಡ:
ಅದು ಶಾಲೆಯೂ ಅಲ್ಲ, ಟ್ಯೂಷನ್ ಸಹ ಅಲ್ಲ. ಆದರೂ ಮಕ್ಕಳು ಪ್ರತಿನಿತ್ಯ ಪುಸ್ತಕ ಹಿಡಿದು ಕಲಿಯಲು ಬರುತ್ತಾರೆ. ಸೃಜನಶೀಲ ಚಟುವಟಿಕೆಗಳಲ್ಲಿ ತಲ್ಲೀನರಾಗುತ್ತಾರೆ. ಇದೆಲ್ಲ ಕಂಡುಬಂದಿದ್ದು ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ. ಅಲ್ಲಿನ ವಿಶಿಷ್ಟ ಕಾರ್ಯಗಳು ಗ್ರಾಮದ ಅಭ್ಯುದಯಕ್ಕೆ ಕಾರಣವಾಗುತ್ತಿದೆ.
ಮಂಗಳಗಟ್ಟಿ ಗ್ರಾಮದಲ್ಲಿ ಪ್ರತಿನಿತ್ಯ 200ಕ್ಕೂ ಅಧಿಕ ಮಕ್ಕಳು ಸ್ವಯಂಪ್ರೇರಿತರಾಗಿ ಸೇವಾ ಭಾರತಿ ಟ್ರಸ್ಟ್, ಜನನಿ ಪ್ರತಿಷ್ಠಾನ ಹಾಗೂ ಗ್ರಾಮವಿಕಾಸ ಸಹಯೋಗದಲ್ಲಿ ನಡೆಯುವ ಮನೆಪಾಠಗಳಲ್ಲಿ ತಪ್ಪದೇ ಪಾಲ್ಗೊಳ್ಳುತ್ತಾರೆ. ಹೊಸದಿಗಂತ ಮಾಧ್ಯಮದೊಂದಿಗೆ ಈ ಮನೆಪಾಠಗಳ ಕುರಿತು ಮಾತು ಹಂಚಿಕೊಂಡ ಗ್ರಾಮವಿಕಾಸದ ಕಾರ್ಯಕರ್ತ ಚಂದ್ರಗೌಡ ಪಾಟೀಲ, ಕಳೆದ ಒಂಬತ್ತು ತಿಂಗಳಿನಿಂದ ಮಂಗಳಗಟ್ಟಿಯಲ್ಲಿ ಮನೆಪಾಠಗಳು ನಡೆಯುತ್ತಿವೆ. ಆರಂಭದಲ್ಲಿ ಕೇವಲ 20 ವಿದ್ಯಾರ್ಥಿಗಳು ಬರುತ್ತಿದ್ದರು. ಈಗ 220 ವಿದ್ಯಾರ್ಥಿಗಳು ಪ್ರತಿನಿತ್ಯ ಮನೆಪಾಠಕ್ಕೆ ಸ್ವಯಂಪ್ರೇರಿತರಾಗಿ ಬರುತ್ತಾರೆ. ವಿದ್ಯಾರ್ಥಿಗಳು ಹೆಚ್ಚಾದಂತೆ ಈಗ 4 ಮನೆಪಾಠ ಕೇಂದ್ರಗಳು ನಡೆಯುತ್ತಿದ್ದು, 8 ಜನ ಬೋಧಕರು ಜೊತೆಗೆ ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಆರಂಭದಲ್ಲಿ ಗ್ರಾಮಸ್ಥರಿಂದ ನಿರೀಕ್ಷಿತ ಸ್ಪಂದನೆ ದೊರೆತಿರಲಿಲ್ಲ. ಕ್ರಮೇಣ ಮನೆಪಾಠಗಳ ಕಾರ್ಯಚಟುವಟಿಕೆಗಳ ಮೂಲಕ ಮಕ್ಕಳಲ್ಲಾದ ಬದಲಾವಣೆ ಕಂಡು ಅನೇಕ ಪೋಷಕರು ತಮ್ಮ ಮಕ್ಕಳನ್ನು ಮನೆಪಾಠಗಳಿಗೆ ಸೇರಿಸುತ್ತಿದ್ದಾರೆ. ಪ್ರತಿನಿತ್ಯ ಸಂಜೆ ಒಂದುವರೆ ಗಂಟೆಗಳ ಕಾಲ ಗ್ರಾಮದ ಸಮುದಾಯ ಭವನ, ದೇವಸ್ಥಾನ, ಅಂಗನವಾಡಿ ಕೇಂದ್ರಗಳಲ್ಲಿ ಮನೆಪಾಠಗಳು ನಡೆಯುತ್ತಿವೆ. ತರಗತಿಯನುಸಾರ ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಪಿಯುಸಿ, ಡಿಗ್ರಿ ಓದಿದ ಯುವಕ, ಯುವತಿಯರು ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಪಠ್ಯ ವಿಷಯದ ಜೊತೆಗೆ ಮಕ್ಕಳಿಗೆ ಮುಖ್ಯವಾಗಿ ಸಾಮಾನ್ಯ ಜ್ಞಾನ, ಹಾಡು, ಅಮೃತ ವಚನ, ಶ್ಲೋಕ, ಏಕಾಗ್ರತೆ ಹೆಚ್ಚಿಸುವ ಆಟ, ಕರಕುಶಲ ಚಟುವಟಿಕೆಗಳನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ. ಪ್ರತಿವಾರ ಯೋಗ, ಗ್ರಾಮ ಸ್ವಚ್ಛತಾ ಕಾರ್ಯ, ಬೆಳದಿಂಗಳ ಊಟ ಮುಂತಾದ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಅನ್ಯೋನ್ಯತೆ, ಸೇವಾ ಮನೋಭಾವ ಬೆಳೆಸುತ್ತಿದ್ದೇವೆ.

ಗ್ರಾಮದ ಯುವಕರ ಬೆಂಬಲ:
ಮನೆಪಾಠದಿಂದ ಮಕ್ಕಳಲ್ಲಿ ದುಶ್ಚಟ, ಸಮಯ ವ್ಯರ್ಥ ಮುಂತಾದ ದುರ್ಗುಣಗಳು ಕ್ಷೀಣಿಸಿವೆ. ಪ್ರತಿನಿತ್ಯ ತಂದೆ-ತಾಯಿಗೆ, ಗುರು-ಹಿರಿಯರಿಗೆ ನಮಸ್ಕರಿಸುವುದು, ಉತ್ತಮ ನಡೆವಳಿಕೆ ಮುಂತಾದ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಪ್ರೇರಿತರಾದ ಗ್ರಾಮದ ಯುವಕರು ಸಹ ತಮ್ಮ ಹುಟ್ಟಿದ ಹಬ್ಬದಂದು ದುಂದು ವೆಚ್ಚ ಮಾಡದೆ, ಅದೇ ಹಣದಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ಕೊಡಿಸುತ್ತಿದ್ದಾರೆ. 30 ಯುವಕರ ಗುಂಪು ಮನೆಪಾಠಗಳ ಏಳಿಗೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸುತ್ತಿದೆ. ಕಲಿಕೆ ಮಕ್ಕಳಿಗಾದರೂ ಅದರ ಪ್ರಭಾವ ಊರಿನ ಜನರಿಗೆ ತಟ್ಟಿದೆ. ಮಕ್ಕಳ ಸದ್ಗುಣ, ಉತ್ತಮ ನಡೆವಳಿಕೆ ಕಂಡ ಗ್ರಾಮದ ಅನೇಕರು ಕುಡಿತ, ಧೂಮಪಾನ ಮುಂತಾದ ದುಶ್ಚಟ ತ್ಯಜಿಸಿರುವುದು ಪ್ರಶಂಸನಾರ್ಹವಾಗಿದೆ.
ಮನೆಪಾಠಗಳಲ್ಲಿ ಮಕ್ಕಳಿಗೆ ವ್ಯಕ್ತಿತ್ವ ವಿಕಸನ, ಸರ್ವತೋಮುಖ ಬೆಳವಣಿಗೆಗೆ ಪೂರಕ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಸಜ್ಜನರನ್ನಾಗಿ ರೂಪಿಸಲಾಗುತ್ತಿದೆ. ಮಂಗಳಗಟ್ಟಿಯ ಮಾದರಿ ಕಾರ್ಯ ಎಲ್ಲಡೆ ವ್ಯಾಪಿಸಲಿ ಎಂಬುದೇ ಆಶಯ.
ಗ್ರಂಥಾಲಯದ ಜ್ಞಾನ ಪ್ರಸಾರ:
ಗ್ರಾಮವಿಕಾಸದಿಂದ ಮಂಗಳಗಟ್ಟಿಯಲ್ಲಿ ಸ್ವಾಮಿ ವಿವೇಕಾನಂದ ಗ್ರಂಥಾಲಯ ನಡೆಯುತ್ತಿದೆ. ಸರ್ಧಾತ್ಮಕ ಪರೀಕ್ಷೆ ತಯಾರಿ ಪುಸ್ತಕ, ಸಾಹಿತ್ಯ, ಧಾರ್ಮಿಕ ಪುಸ್ತಕಗಳು ಸೇರಿದಂತೆ 2500ಕ್ಕೂ ಅಕ ಪುಸ್ತಕಗಳು ಇಲ್ಲಿವೆ. ಸಣ್ಣ ಹುಡುಗರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳುತ್ತಿರುವುದು ಉಲ್ಲೇಖನಿಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!