Saturday, December 9, 2023

Latest Posts

ಸಾಹಸ-ಸಾಮರಸ್ಯದ ಪ್ರತೀಕ ವೀರ ಪರಂಪರೆಯ ಹೊಂಡೆಯಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಾಗರಾಜ ಶೆಟ್ಟಿ

ಅಂಕೋಲಾ: ದೀಪಾವಳಿ ಸಂದರ್ಭದಲ್ಲಿ ಬಲಿಪ್ರತಿಪದೆಯ ದಿನ ಅಂಕೋಲಾ ತಾಲೂಕಿನ ಕ್ಷತ್ರಿಯ ಕೋಮಾರಪಂಥ ಸಮಾಜದಿಂದ ಹೊಂಡೆಯಾಟ ಎಂಬ ವೈಶಿಷ್ಟ್ಯಪೂರ್ಣ ಸಾಂಪ್ರದಾಯಿಕ ಆಚರಣೆ ತಲೆಮಾರುಗಳಿಂದ ನಡೆಯುತ್ತ ಬಂದಿದ್ದು, ಇದು ಸಮಾಜದ ಐಕ್ಯತೆ, ಸಾಹಸಗಳ ಪ್ರತೀಕವಾಗಿದೆ.

ವೀರ ಪರಂಪರೆ ಸ್ಮರಣೆ
ಕನ್ನಡ ನಾಡನ್ನು ಆಳಿದ ಹಲವು ಅರಸರ ಸೇನಾ ಪಡೆಗಳಲ್ಲಿ ನಾಡಿನ ರಕ್ಷಣೆಗಾಗಿ ಕೋಮಾರಪಂಥ ಸಮಾಜದವರು ತೋರಿದ ಧೈರ್ಯ ಹೋರಾಟಗಳ ಕುರಿತು ಹಲವಾರು ಐತಿಹಾಸಿಕ ದಾಖಲೆಗಳು ಸಿಗುತ್ತವೆ. ದೀಪಾವಳಿ ಸಂದರ್ಭದಲ್ಲಿ ನಡೆಯುವ ಹೊಂಡೆಯಾಟದ ಮೂಲಕ ಹೋರಾಟದ ವೀರ ಪರಂಪರೆ ಸ್ಮರಿಸಲಾಗುತ್ತದೆ.

ಬಲಾಬಲ ಪ್ರದರ್ಶನ
ಹೊಂಡೆಯಾಟದಲ್ಲಿ ಕುಂಬಾರಕೇರಿ ಲಕ್ಷ್ಮೇಶ್ವರ ಭಾಗದ ಒಂದು ತಂಡ ಹಾಗೂ ಹೊನ್ನಿಕೇರಿ ಭಾಗದ ಒಂದು ತಂಡ ಸಮಾಜದ ಹಿರಿಯರ ಹಾಗೂ ಮುಖ್ಯಸ್ಥರ ಸಲಹೆ ಸೂಚನೆ ಪಡೆದು ಪಟ್ಟಣದ ವಿವಿಧ ಭಾಗಗಳಲ್ಲಿ ಕವಣೆಯಲ್ಲಿ ಹಿಂಡಲಕಾಯಿ ಹಾಕಿ ಹೊಡೆಯುವ ಮೂಲಕ ಪರಸ್ಪರ ಎದುರಾಗಿ ಬಲಾಬಲ ಪ್ರದರ್ಶಿಸುತ್ತಾರೆ. ಹಿಂಡಲಕಾಯಿ ಕಾಳಗದಲ್ಲಿ ದಾಳಿ ನೆಡೆಸಲು ಕೆಲವೊಂದು ಸುರಕ್ಷತಾ ನಿಯಮಗಳಿದ್ದು ಅದನ್ನು ಪಾಲಿಸುವ ಮೂಲಕವೇ ಕಾದಾಟ ನಡೆಸಬೇಕಾಗುತ್ತದೆ.

ಹೀಗೆ ನಡೆಯುವ ಹೊಂಡೆ ಕಾಳಗದಲ್ಲಿ ಗೆದ್ದ ತಂಡಕ್ಕೆ ದೊಡ್ಡ ಮೊಗ್ಗೆಕಾಯಿ ಹೋರಾಟ ನಡೆಸಿದ ಇನ್ನೊಂದು ತಂಡಕ್ಕೆ ಸಣ್ಣ ಮೊಗ್ಗೆಕಾಯಿ ಬಹುಮಾನವಾಗಿ ನೀಡಲಾಗುತ್ತದೆ. ನಂತರ ಎರಡೂ ತಂಡಗಳು ಪರಸ್ಪರ ಸಾಮರಸ್ಯದೊಂದಿಗೆ ಇಲ್ಲಿನ ದೊಡ್ಡ ದೇವರು ಎಂದು ಖ್ಯಾತಿ ಪಡೆದಿರುವ ವೆಂಕಟರಮಣ ದೇವಾಲಯಕ್ಕೆ ತೆರಳಿ ತಮ್ಮ ಊರುಗಳಿಗೆ ಮರಳುತ್ತವೆ.

ಕೋಮಾರಪಂಥ ಸಮಾಜದ ಜನ ಹೊಂಡೆ ಆಟ ಮುಂದವರಿಸಿಕೊಂಡು ಹೋಗುವ ಮೂಲಕ ಶತಮಾನಗಳ ಪರಂಪರೆ ಉಳಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.

ಶೋಭಾಯಾತ್ರೆ
ಸಾಂಪ್ರದಾಯಿಕ ಹೊಂಡೆಯಾಟಕ್ಕೆ ಕಳೆದ ವರ್ಷದಿಂದ ಉತ್ಸವದ ರೂಪವನ್ನು ನೀಡಲಾಗಿದ್ದು, ವಿವಿಧ ಆಕರ್ಷಣೆಗಳೊಂದಿಗೆ ಶೋಭಾಯಾತ್ರೆ ನಡೆಸಲಾಗುತ್ತಿದೆ. ಈ ಬಾರಿಯೂ ನವೆಂಬರ್ 14ರಂದು ಮಂಗಳವಾರ ಬಲಿಪಾಡ್ಯಮಿ ದಿನದಂದು ಸಂಜೆ ವಿಶೇಷ ಆಕರ್ಷಣೆಗಳೊಂದಿಗೆ ಹೊಂಡೆಯಾಟ, ಹೊಂಡೆ ಉತ್ಸವ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!