April 15, 2026
Wednesday, April 15, 2026
spot_img

ಮರ್ಯಾದಾ ಹತ್ಯೆ ಪ್ರಕರಣ: ಶವ ಸುಟ್ಟು ಸಾಕ್ಷ್ಯ ನಾಶಪಡಿಸಿದ್ದ ಆರೋಪಿಗಳು ಈಗ ಕಂಬಿ ಹಿಂದೆ

ಹೊಸದಿಗಂತ ಬೆಳಗಾವಿ:

ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆಯ ರಣಕೌರ್ಯವೊಂದು ಬೆಳಕಿಗೆ ಬಂದಿದ್ದು, ಪ್ರಿಯಕರನೊಂದಿಗೆ ಬದುಕಲು ಹಠ ಹಿಡಿದಿದ್ದ ಯುವತಿಯನ್ನು ಆಕೆಯ ಕುಟುಂಬಸ್ಥರೇ ವಿಷವಿಕ್ಕಿ ಕೊಲೆ ಮಾಡಿದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಮಕನಮರಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ ಎಂದು ಎಸ್ಪಿ ಕೆ. ರಾಮರಾಜನ್ ತಿಳಿಸಿದ್ದಾರೆ.

ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸತ್ಯವ್ವ ಸಂತೋಷ ಹಳವಿ (24) ಹತ್ಯೆಗೀಡಾದ ದುರ್ದೈವಿ. ಸತ್ಯವ್ವ ಮತ್ತು ಹುಕ್ಕೇರಿ ತಾಲೂಕಿನ ಕೃಷ್ಣಾ ಸಹದೇವ ಪಾಟೀಲ ಎಂಬುವವರು ಪರಸ್ಪರ ಪ್ರೀತಿಸುತ್ತಿದ್ದರು. ಸತ್ಯವ್ವನಿಗೆ ಈಗಾಗಲೇ ಸಂತೋಷ್ ಎಂಬುವವರೊಂದಿಗೆ ಮದುವೆಯಾಗಿದ್ದರೂ, ಕೃಷ್ಣಾ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿರಲಿಲ್ಲ. ಈ ಕಾರಣದಿಂದಾಗಿ ಫೆಬ್ರವರಿ 17 ರಂದು ಆಕೆ ಕೃಷ್ಣಾನೊಂದಿಗೆ ಮನೆ ಬಿಟ್ಟು ಹೋಗಿ ಬೆಳವಡಿಯಲ್ಲಿ ವಾಸವಿದ್ದಳು.

ಮನೆ ಬಿಟ್ಟು ಹೋಗಿದ್ದ ಸತ್ಯವ್ವನನ್ನು ಪತ್ತೆ ಹಚ್ಚಿ ಕರೆತಂದಿದ್ದ ಕುಟುಂಬಸ್ಥರು, ಜಾತಿ ಬೇರೆ ಎಂಬ ಕಾರಣಕ್ಕೆ ಪ್ರೀತಿಯನ್ನು ವಿರೋಧಿಸಿದ್ದರು. ಆದರೆ, ಮಾರ್ಚ್ 21 ರಂದು ಸಾಂಗ್ಲಿ ಜಿಲ್ಲೆಯ ಅರಗ ಗ್ರಾಮದಲ್ಲಿದ್ದಾಗ “ನಾನು ಮತ್ತೆ ಪ್ರಿಯಕರನ ಬಳಿಯೇ ಹೋಗುತ್ತೇನೆ” ಎಂದು ಸತ್ಯವ್ವ ಪಟ್ಟು ಹಿಡಿದಿದ್ದಾಳೆ. ಇದರಿಂದ ಕೆರಳಿದ ಮನೆಯವರು ಆಕೆಗೆ ಬಲವಂತವಾಗಿ ವಿಷ ಕುಡಿಸಿ ಹತ್ಯೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅಂದೇ ರಾತ್ರಿ ಅರಗ ಗ್ರಾಮದ ಸ್ಮಶಾನದಲ್ಲಿ ಶವವನ್ನು ಸುಟ್ಟು ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ.

ಪ್ರಿಯಕರ ಕೃಷ್ಣಾ ಪಾಟೀಲ ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ ಯಮಕನಮರಡಿ ಪಿಐ ಜಾವೀದ ಎಫ್. ಮುಷಾಪುರಿ ತಂಡ, ತಾಂತ್ರಿಕ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಕೊಲೆಗಡುಕರನ್ನು ಬಂಧಿಸಿದೆ.

ಬಂಧಿತ ಆರೋಪಿಗಳು:

ಪ್ರಕಾಶ ಭೀಮಪ್ಪ ಹಳವರ (46) – ಮೃತಳ ಚಿಕ್ಕಪ್ಪ

ಶಾನೂರ ಸದಾಶಿವ ಹಳವರ (35) – ಮೃತಳ ಸಹೋದರ

ಕಲ್ಲಪ್ಪ ಮಾಯಪ್ಪ ಹಳವಿ (40) – ಮೃತಳ ಭಾವ

ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !