August 7, 2026
Friday, August 7, 2026
spot_img

ದೆಹಲಿಯಲ್ಲಿ ಮುಂದುವರಿದ ವರುಣನ ಆರ್ಭಟ: ಜಲಾವೃತಗೊಂಡ ರಸ್ತೆಗಳು, ಸ್ತಬ್ಧಗೊಂಡ ವಾಹನ ಸಂಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಎನ್‌ಸಿಆರ್ ಪ್ರದೇಶಗಳಲ್ಲಿಇಂದು ಸಂಜೆ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪೀಕ್ ಅವರ್‌ನಲ್ಲಿ ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ಉದ್ಯೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.

ಸ್ತಬ್ಧಗೊಂಡ ಮುಖ್ಯ ರಸ್ತೆಗಳು:

ಸಂಜೆ ಮಳೆ ತೀವ್ರಗೊಂಡಂತೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಮೆಹ್ರೌಲಿ-ಬದರ್‌ಪುರ ರಸ್ತೆ, ಐಟಿಒ, ವಜೀರಾಬಾದ್ ರಸ್ತೆ, ಪಟೇಲ್ ರಸ್ತೆ, ರೋಹ್ಟಕ್ ರಸ್ತೆ, ಶಂಕರ್ ರಸ್ತೆ, ಕೀರ್ತಿ ನಗರ, ದೆಹಲಿ-ಜೈಪುರ ಹೆದ್ದಾರಿ, ಪೀರಾಗರ್ಹಿ ಮತ್ತು ಶಾಹೀನ್ ಬಾಗ್‌ನಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗಿದೆ. ನೀರು ತುಂಬಿದ ರಸ್ತೆಗಳಲ್ಲಿ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದು, ಸವಾರರು ಗಂಟೆಗಟ್ಟಲೆ ಕಾಯುವಂತಾಗಿದೆ.

ಪೂರ್ವ ದೆಹಲಿಯ ಜಿಟಿ ರಸ್ತೆ, ಜಿಟಿಬಿ ಎನ್‌ಕ್ಲೇವ್ ಮತ್ತು ದಿಲ್‌ಶಾದ್ ಗಾರ್ಡನ್ ಭಾಗಗಳಲ್ಲೂ ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ಇದೇ ರೀತಿಯ ಪರಿಸ್ಥಿತಿ ನೆರೆಯ ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್ ಮತ್ತು ಫರಿದಾಬಾದ್‌ಗಳಲ್ಲೂ ಕಂಡುಬಂದಿದ್ದು, ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿವೆ.

ಜಲಾವೃತಗೊಂಡ ತಗ್ಗು ಪ್ರದೇಶಗಳು

ದಕ್ಷಿಣಪುರಿ, ಓಖ್ಲಾ, ಸಂಗಮ್ ವಿಹಾರ್, ಸೈನಿಕ ಫಾರ್ಮ್ಸ್ ಮತ್ತು ಮೆಹ್ರೌಲಿ-ಬದರ್‌ಪುರ ರಸ್ತೆಯ ಕೆಲವು ಭಾಗಗಳು ಸೇರಿದಂತೆ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಚರಂಡಿಗಳು ತುಂಬಿ ಹರಿಯುತ್ತಿರುವುದರಿಂದ ಮತ್ತು ಕಡಿಮೆ ದೃಶ್ಯ ಗೋಚರತೆಯಿಂದಾಗಿ ರಸ್ತೆಗಳಲ್ಲಿ ವಾಹನಗಳು ಕೆಟ್ಟು ನಿಂತಿವೆ.

ಇದನ್ನೂ ಓದಿ:

ಆಗಸ್ಟ್ 10 ರವರೆಗೆ ಮಳೆ ಮುನ್ಸೂಚನೆ:

ದೆಹಲಿಗೆ ಈಗಾಗಲೇ ‘ರೆಡ್ ಅಲರ್ಟ್’ ಘೋಷಿಸಿರುವ ಭಾರತೀಯ ಹವಾಮಾನ ಇಲಾಖೆ (IMD), ಮುಂದಿನ ಕೆಲವು ಗಂಟೆಗಳ ಕಾಲ ಹಲವು ಕಡೆಗಳಲ್ಲಿ ಸಾಧಾರಣ ಮಳೆ ಹಾಗೂ ಕೆಲವು ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ದೆಹಲಿಯಲ್ಲಿ ಆಗಸ್ಟ್ 10 ರವರೆಗೆ ಲಘುವಾದ ಅಥವಾ ಸಾಧಾರಣ ಮಳೆಯಾಗಲಿದ್ದು, ಕೆಲವೆಡೆ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !