ಮರ್ಯಾದೆ ಹತ್ಯೆ ಪ್ರಕರಣ: ಎಂಟು ವರ್ಷದ ಬಳಿಕ ಇಬ್ಬರಿಗೆ ಗಲ್ಲು ಶಿಕ್ಷೆ ತೀರ್ಪು

ದಿಗಂತ ವರದಿ ವಿಜಯಪುರ:

ಮರ್ಯಾದೆ ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ ಹಾಗೂ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ನಗರದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಮುದ್ದೇಬಿಹಾಳ ತಾಲೂಕಿನ ಹಾಳಗುಂಡಕನಾಳ ಗ್ರಾಮದ ಇಬ್ರಾಹಿಂಸಾಬ್ ಅತ್ತಾರ, ಅಕ್ಬರಸಾಬ್ ಅತ್ತಾರ ಗಲ್ಲು ಶಿಕ್ಷೆಗೆ ಒಳಗಾದವರು.

ಇನ್ನು ರಮಜಾನಬಿ ಅತ್ತಾರ, ದಾವಲಬಿ ಜಮಾದಾರ್, ಅಜಮಾ ದಖನಿ, ಜಿಲಾನಿ‌ ದಖನಿ, ಅಬ್ದುಲ್ ಖಾದರ್ ದಖನಿ, ದಾವಲಬಿ ಧನ್ನೂರ ಅವರಿಗೆ ನ್ಯಾಯಾಲಯ ಜೀವಾವಧಿ‌ ಶಿಕ್ಷೆ ವಿಧಿಸಿದ್ದು, ಈ ಅಪರಾಧಿಗಳಿಗೆ 4.19 ಲಕ್ಷ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಕಳೆದ 2017ರಲ್ಲಿ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಾಳಗುಂಡಕನಾಳ ಗ್ರಾಮದಲ್ಲಿ ಮರ್ಯಾದೆ ಹತ್ಯೆ ನಡೆದಿತ್ತು. ಹಾಳಗುಂಡಕನಾಳ ಗ್ರಾಮದ ಬಾನು ಬೇಗಂ ಅತ್ತಾರ್ ಹಾಗೂ ಸಾಯಬಣ್ಣ ಕೊಣ್ಣೂರ ಎಂಬುವರು 2017ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇದು ಬಾನುಬೇಗಂ ಮನೆಯವರ ಕೆಂಗಣ್ಣಿಗೆ ಗುರಿಯಾಗಿತ್ತು.

ಮದುವೆಯಾದ ಬಳಿಕ ಬೇರೆ ನಗರದಲ್ಲಿ ಬಾನು ಬೇಗಂ ಹಾಗೂ ಸಾಯಬಣ್ಣ ವಾಸವಿದ್ದರು. ಈ ವೇಳೆ ಬಾನು ಬೇಗಂ ಗರ್ಭಿಣಿಯಾದ ಕಾರಣ ಹೆರಿಗೆಗಾಗಿ ಗಂಡನ ಮನೆಗೆ ಬಂದಿದ್ದಳು. ಇದನ್ನೇ ಕಾಯುತ್ತಿದ್ದ ಆಕೆಯ ಪೋಷಕರು ಬಾನುಬೇಗಂ ಹಾಗೂ ಸಾಹೇಬಣ್ಣ ಅವರಿಬ್ಬರನ್ನು ಕೊಲೆ ಮಾಡಲು ಮುಂದಾಗಿದ್ದರು.

ಪತಿ ಮತ್ತು ಪತ್ನಿ ಮೇಲೆ ಹಲ್ಲೆ ಮಾಡುವ ವೇಳೆ ಹಲ್ಲೆಗೊಳಗಾಗಿ ಬಾನುಬೇಗಂ ಮೂರ್ಛೆ ಹೋಗಿದ್ದಳು. ಮೂರ್ಛೆ ಹೋದ ಗರ್ಭಿಣಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಈ ವೇಳೆ ಹಲ್ಲೆಕೋರರಿಂದ ಸಾಯಬಣ್ಣನನ್ನು ರಕ್ಷಣೆ ಮಾಡಲಾಗಿತ್ತು. ಬಾನುಬೇಗಂ ತಂದೆ, ತಾಯಿ ಹಾಗೂ ಅವರ ಸಂಬಂಧಿಕರು ಈ ಕೃತ್ಯ ಎಸಗಿದ್ದರು.

ಈ ಪ್ರಕರಣ ಕುರಿತು ತನಿಖೆ ನಡೆಸಿ ತಾಳಿಕೋಟೆ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದರು. ಸುದೀರ್ಘವಾದ ವಾದ ಆಲಿಸಿದ ನ್ಯಾಯಾಧೀಶ ಸತೀಶ್ ಎಲ್.ಪಿ. ಅವರು ಆರೋಪ ಸಾಬೀತಾಗಿದ್ದರಿಂದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ಎಸ್. ಲೋಕೂರ ವಾದ ಮಂಡಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!