ಹೊಸದಿಗಂತ ಕುಶಾಲನಗರ:
ಪಿರಿಯಾಪಟ್ಟಣ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕೊಡಗಿನ ಯುವಕನೊಬ್ಬ ಮೃತಪಟ್ಟಿದ್ದಾನೆ.
ಕುಶಾಲನಗರ ಸಮೀಪದ ಕೂಡಿಗೆಯ ನಿವಾಸಿ, ಮಾಜಿ ಸೈನಿಕ ಗಿರಿಯಪ್ಪ ಎಂಬವರ ಪುತ್ರ ಸಚಿನ್ (27) ಮೃತ ಯುವಕ.
ಸಚಿನ್, ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು ತನ್ನ ಕರ್ತವ್ಯ ಮುಗಿಸಿ ಪಾಲಿಬೆಟ್ಟದಿಂದ ಪಿರಿಯಾಪಟ್ಟಣ ಮಾರ್ಗವಾಗಿ ಕೂಡಿಗೆಗೆ ಬರುವ ಸಂದರ್ಭದಲ್ಲಿ ಪಿರಿಯಾಪಟ್ಟಣ- ಕುಶಾಲನಗರ ಹೆದ್ದಾರಿಯಲ್ಲಿ ಬೈಕ್’ಗೆ ಲಾರಿ ಡಿಕ್ಕಿಯಾಗಿದೆ. ಈ ಸಂದರ್ಭ ಸಚಿನ್ ಬೈಕ್’ನಿಂದ ಕೆಳಗೆ ಬಿದ್ದಿದ್ದು, ಅವರ ಮೇಲೆಯೇ ಲಾರಿ ಹರಿದಿದೆ. ತಲೆ ಹಾಗೂ ಇತರ ಭಾಗಗಳಿಗೆ ತೀವ್ರವಾದ ಗಾಯವಾಗಿದ್ದ ಅವರನ್ನು ಪಿರಿಯಾಪಟ್ಟಣ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮೈಸೂರು ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಹೇಳಲಾಗಿದೆ.