ಹೊಸದಿಗಂತ ಡಿಜಿಟಲ್ ಡೆಸ್ಕ್
ಕಾಸರಗೋಡು ಜಿಲ್ಲೆಯ ಪ್ರತಾಪನಗರ ಬೀಟಿಗದ್ದೆ ನಿವಾಸಿ, ಬಿಜೆಪಿ ಕುಂಬಳೆ ಮಂಡಲ ಕಾರ್ಯದರ್ಶಿ, ಪ್ರತಾಪನಗರ ಜೈ ಹನುಮಾನ್ ಫ್ರೆಂಡ್ಸ್ ಕ್ಲಬ್‌ನ ಸ್ಥಾಪಕ, ಹಿಂದು ಪರ ಸಂಘಟನೆಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿರುವ ಧನ್‌ರಾಜ್ ಪೂಜಾರಿ (೪೪) ಶನಿವಾರ ಅಪರಾಹ್ನ ಬಂದ್ಯೋಡು ಶಿರಿಯದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಈ ಹಿಂದೆ ಕೇರಳ ಸಾರಿಗೆ ನಿಗಮದಲ್ಲಿ ಅರೆಕಾಲಿಕ ನಿರ್ವಾಹಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಬಳಿಕ ಊರಿನಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕುಂಬಳೆಯಿಂದ ತನ್ನ ಮನೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ ೬೬ ಶಿರಿಯ ತಲುಪಿದಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಧನ್‌ರಾಜ್ ಅವರನ್ನು ಕೂಡಲೇ ಬಂದ್ಯೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ಕೊನೆಯುಸಿರೆಳೆದರು.
ಮೃತರು ಅವಿವಾಹಿತರಾಗಿದು , ದಿ.ಲೋಕನಾಥ ಪೂಜಾರಿ ಮತ್ತು ಕಮಲಾ ದಂಪತಿಯ ಪುತ್ರನಾಗಿದ್ದಾರೆ. ಸಹೋದರರಾದ ಕಿಶೋರ್‌ಕುಮಾರ್ (ಜಪಾನ್), ಜಗದೀಶ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.