August 31, 2026
Monday, August 31, 2026
spot_img

ಭಾಗಮಂಡಲದಲ್ಲಿ ಭೀಕರ ಹತ್ಯಾಕಾಂಡ: ಕುಡಿದ ಮತ್ತಿನಲ್ಲಿ ಒಡಹುಟ್ಟಿದವರ ಪ್ರಾಣ ತೆಗೆದ ಪಾಪಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುಡಿದ ಮತ್ತಿನಲ್ಲಿ ವಿವೇಚನೆ ಕಳೆದುಕೊಂಡ ವ್ಯಕ್ತಿಯೊಬ್ಬ ತನ್ನ ಒಡಹುಟ್ಟಿದ ಅಕ್ಕ ಮತ್ತು ತಮ್ಮನನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.

ಕುಂದಚೇರಿ ಗ್ರಾಮದ ನಿವಾಸಿಗಳಾದ ಅಡಿಯರ ಯಶೋದಾ (45) ಮತ್ತು ಕುಂಞಿರಾಮ (47) ಕೊಲೆಯಾದ ದುರ್ದೈವಿಗಳು. ಇವರ ಸ್ವಂತ ಅಣ್ಣ ಅಡಿಯರ ಚಂದು ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಬುಧವಾರ ಸಂಜೆ ಚಂದು ವಿಪರೀತ ಮದ್ಯ ಸೇವಿಸಿ ಮನೆಗೆ ಬಂದಿದ್ದು, ಯಾವುದೋ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಕುಡಿತದ ಅಮಲಿನಲ್ಲಿ ಅಕ್ಕ ಮತ್ತು ತಮ್ಮನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ತೀವ್ರವಾಗಿ ಗಾಯಗೊಂಡಿದ್ದ ಯಶೋದಾ ಮತ್ತು ಕುಂಞಿರಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕೊಡಗು ಎಸ್ಪಿ ಬಿಂದುಮಣಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಮತ್ತು ಕೊಲೆಗೆ ನಿಖರ ಕಾರಣ ತಿಳಿಯಲು ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !