ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಪತ್ರೆಯ ಲಿಫ್ಟ್ ಕುಸಿದುಬಿದ್ದ ಪರಿಣಾಮ ಕೆಲ ಸಮಯದ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ಲೋಹಿಯಾ ನಗರದ ಕ್ಯಾಪಿಟಲ್ ಆಸ್ಪತ್ರೆಯಲ್ಲಿ ನಡೆದ ಈ ದುರಂತ ಘಟನೆಯಲ್ಲಿ ಇತರ ಇಬ್ಬರಿಗೂ ಗಾಯಗಳಾಗಿವೆ. ರೋಗಿಯ ಸಂಬಂಧಿಕರು ಪ್ರತಿಭಟನೆ ನಡೆಸಿ ಆಸ್ತಿಪಾಸ್ತಿ ಧ್ವಂಸಗೊಳಿಸಿದ್ದರಿಂದ ಈ ಘಟನೆ ಆಸ್ಪತ್ರೆಯಲ್ಲಿ ಗೊಂದಲಕ್ಕೆ ಕಾರಣವಾಯಿತು.
ಕರೀಷ್ಮಾ ಎಂಬುವವರಿಗೆ ಆಗಷ್ಟೇ ಮಗುವಿಗೆ ಜನ್ಮ ನೀಡಿದ್ದರು, ಅವರನ್ನು ವಾರ್ಡ್ಗೆ ಶಿಫ್ಟ್ ಮಾಡಲಾಗುತ್ತಿತ್ತು. ಇಬ್ಬರು ಆಸ್ಪತ್ರೆಯ ಸಿಬ್ಬಂದಿ ಕೂಡ ಆಕೆಯ ಜತೆಗಿದ್ದರು. ಲಿಫ್ಟ್ ಕೆಳಗೆ ಬರುತ್ತಿರುವಾಗ ಕೇಬಲ್ ತುಂಡಾಗಿ ಲಿಫ್ಟ್ ಕೆಳಗೆ ಅಪ್ಪಳಿಸಿತು. ಆಕೆಯ ತಲೆ ಹಾಗೂ ಕುತ್ತಿಗೆಗೆ ಗಂಭೀರ ಗಾಯಗಳಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. 45 ನಿಮಿಷಗಳ ಬಳಿಕ ಬಾಗಿಲು ಒಡೆದು ಅವರನ್ನು ಹೊರ ತೆಗೆಯಲಾಗಿತ್ತು. ಘಟನೆ ನಡೆದ ತಕ್ಷಣ ಆಸ್ಪತ್ರೆ ಸಿಬ್ಬಂದಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.