ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರ್ವಾಡಿ ಉದ್ಯಮಿಯೊಬ್ಬರು ಹೋಳಿ ಹಬ್ಬಕ್ಕಾಗಿ ಊಟ ತಯಾರಿಸಿದ್ದರು, ಆದರೆ, ಊಟ ಹೆಚ್ಚಾಗಿ ಉಳಿದಿದ್ದರಿಂದ ಹತ್ತಿರದ ವಸತಿ ಶಾಲೆಗೆ ಕೊಟ್ಟಿದ್ದರು. ಈ ಊಟವನ್ನು ಸೇವನೆ ಮಾಡಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, 29 ಮಕ್ಕಳು ಅಸ್ವಸ್ಥರಾದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿ. ಕಾಗೇಪುರ ಗ್ರಾಮದಲ್ಲಿರುವ ಗೋಕುಲ ವಿದ್ಯಾಸಂಸ್ಥೆಯ ಹಾಸ್ಟೆಲ್‌ನಲ್ಲಿ ಈ ದುರಂತ ಸಂಭವಿಸಿದೆ.
ಹಾಸ್ಟೆಲ್‌ನಲ್ಲಿ ನಿನ್ನೆ ರಾತ್ರಿ ಆಹಾರ ಸೇವಿಸಿ ಫುಡ್ ಪಾಯ್ಸನ್ ಉಂಟಾಗಿ 30 ವಿದ್ಯಾರ್ಥಿಗಳಿಗೆ ವಾಂತಿ ಬೇಧಿ ಶುರುವಾಗಿದೆ. ಕೂಡಲೇ ಇವರನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಮೃತ ವಿದ್ಯಾರ್ಥಿಯನ್ನು ಅರುಣಾಚಲ ಪ್ರದೇಶದ ಕೆರ್ಲಾಂಗ್(13) ಎಂದು ಗುರುತಿಸಲಾಗಿದೆ.
ಹಬ್ಬದ ಊಟ ಮಾಡಿಸಿ, ಸೇವಿಸಿದ್ದ ಮಾರ್ವಾಡಿಗಳಿಗೂ ವಾಂತಿ, ಭೇದಿ ಆಗಿದ್ದು, ಅವರು ಕೂಡ ಹಲವೆಡೆ ಚಿಕಿತ್ಸೆ ಪಡೆದಿದ್ದಾರೆ. ಈ ಪ್ರಕರಣ ಸಂಬಂಧ ಮಳವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.