ಹೊಸದಿಗಂತ ವರದಿ ವಿಜಯನಗರ:
ಬಡವರ ಅನುಕೂಲಕ್ಕಾ ವಸತಿ ಯೋಜನೆಯನ್ನು ರಾಜ್ಯ ಸರ್ಕಾರ 6 ನೇ ಗ್ಯಾರೆಂಟಿಯಾಗಿ ಪರಿಗಣಿಸಿದ್ದು, ಫೆಬ್ರವರಿ ಅಂತ್ಯದೊಳಗೆ 36 ಸಾವಿರ ಮನೆ ಹಸ್ತಾಂತರದ ಜತೆಗೆ ಇದೇ ವರ್ಷದಲ್ಲಿ1.30 ಲಕ್ಷ ಮನೆಗಳ ಪೂರ್ಣಗೊಳಿಸಲಾಗುವುದು ಎಂದು ವಸತಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಹೇಳಿದರು.
ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ 75 ನೇ ಗಣರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ, ವಿವಿಧ ತುಕಡುಗಳಿಂದ ಗೌರವರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು.
ಸ್ಲಂ ಬೋರ್ಡ್, ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮಂಜೂರಾಗಿರುವ ಅನೇಕ ಮನೆಗಳು ಅಪೂರ್ಣಗೊಂಡಿವೆ. ಸರ್ಕಾರದಿಂದ ಪ್ರತಿ ಮನೆಗೆ 4.50 ಲಕ್ಷ ರೂ. ಸಹಾಯಧನ ದೊರೆಯುತ್ತಿದ್ದು, ಅಷ್ಟರಲ್ಲಿ ಮನೆಗಳು ಪೂರ್ಣಗೊಳ್ಳುತ್ತಿಲ್ಲ ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ 500 ಕೋಟಿ ರೂ. ಬಿಡುಗಡೆಗೆ ಕೋರಿದ್ದು, ಅದರಲ್ಲಿ 300 ಕೋಟಿ ರೂ. ಬಿಡುಗಡೆ ಸಮ್ಮತಿಸಿದ್ದಾರೆ. ಅರ್ಹರಿಗೆ ಈ ಬಾರಿ 36,000 ಮನೆಗಳು ನೀಡುತ್ತಿದ್ದೇವೆ. ಈ ಪೈಕಿ ವಿಜಯನಗರ ಜಿಲ್ಲೆಯಲ್ಲಿ 1160 ಫಲಾನುಭವಿಗಳಿಗೆ ಲಾಭವಾಗಲಿದೆ ಎಂದು ತಿಳಿಸಿದರು.