ರಾಜ್ಯದಲ್ಲಿ 5 ಲಕ್ಷ ಮನೆ ನಿರ್ಮಾಣದ ಗುರಿ: ವಸತಿ ಸಚಿವ ವಿ. ಸೋಮಣ್ಣ

ಹೊಸದಿಗಂತ ವರದಿ, ಕಲಬುರಗಿ:

ಪ್ರಧಾನಮಂತ್ರಿ‌ ನರೇಂದ್ರ ಮೋದಿ ಅವರ ಆಶಯದಂತೆ ನಮ್ಮ ಸರ್ಕಾರದ ಅವಧಿಯಲ್ಲಿಯೇ 5 ಲಕ್ಷ‌ ಮನೆ‌ ನಿರ್ಮಿಸಿ ಬಡವರಿಗೆ ಹಂಚುವ ಗುರಿ ಹೊಂದಲಾಗಿದೆ ಎಂದು
ರಾಜ್ಯದ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ಅವರು ತಿಳಿಸಿದರು.

ಇದಕ್ಕಾಗಿ 6600 ಕೋಟಿ ರೂ. ಒದಗಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಶನಿವಾರ ಸೇಡಂ ಪಟ್ಟಣದಲ್ಲಿ ಸೇಡಂ-ಚಿಂಚೋಳಿ ರಸ್ತೆಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ-ಸರ್ವರಿಗೂ ಸೂರು ಯೋಜನೆಯಡಿ 12 ಎಕರೆ ಪ್ರದೇಶದಲ್ಲಿ 48 ಕೋಟಿ ರೂ. ವೆಚ್ಚದೊಂದಿಗೆ ಜಿ+2 ಮಾದರಿಯ 750 ಮನೆಗಳ‌ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ‌ ನಂತರ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಆವರಣದಲ್ಲಿ ಆಯೋಜಿಸಿದ ಸಾರ್ವಜನಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ತಾಂತ್ರಿಕ ಕಾರಣದಿಂದ ಕಳೆದ‌ ಹಲವಾರು ವರ್ಷಗಳಿಂದ ರಾಜ್ಯಕ್ಕೆ 18 ಲಕ್ಷ ಮನೆ, 6 ಲಕ್ಷ ನಿವೇಶನ ಮಂಜೂರಾತಿಗೆ ಬಾಕಿ ಇದ್ದವು. ನಮ್ಮ ಸರ್ಕಾರ ತಾಂತ್ರಿಕ ದೋಷವನ್ನು ಸರಿದೂಗಿಸಿದ ಪರಿಣಾಮ ಇಷ್ಟು ಸಂಖ್ಯೆಯ ಮನೆ, ನಿವೇಶನಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಮಂಜೂರು ಮಾಡಿದೆ. ಇದರಿಂದ ಸೂರಿಲ್ಲದವರಿಗೆ ಸೂರು ಕಲ್ಪಿಸಬೇಕೆಂಬ ರಾಜ್ಯ ಸರ್ಕಾರದ ಆಶಯಕ್ಕೆ ಹೆಚ್ಚಿನ ಶಕ್ತಿ ಬಂದಿದೆ ಎಂದರು.

ಸೇಡಂ ಪಟ್ಟಣದ ಚಿಂಚೋಳಿ ರಸ್ತೆಯಲ್ಲಿನ 750 ಮನೆಗಳ‌ ನಿರ್ಮಾಣ ಕಾರ್ಯ ಬರುವ ಡಿಸೆಂಬರ್ ಒಳಗೆ ‌ಮುಗಿಸಬೇಕು. ಮನೆಗಳು ಗುಣಮಟ್ಟದಿಂದ ಇರಬೇಕು. ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಇಲ್ಲಿ ಸಮುದಾಯ ಭವನ, ಅಂಗನವಾಡಿ ಕಟ್ಟಡ ಹಾಗೂ ಅರೋಗ್ಯ ಕೇಂದ್ರ ನಿರ್ಮಿಸುವ ಮೂಲಕ ಎಲ್ಲಾ ರೀತಿಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸ್ಥಳದಲ್ಲಿದ್ದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತ ಬಿ.ವೆಂಕಟೇಶ, ಅವರಿಗೆ ನಿರ್ದೇಶನ‌ ನೀಡಿದರು.

ಸೇಡಂ ಶಾಸಕ ಡಾ.ರಾಜಕುಮಾರ ಪಾಟೀಲ ತೇಲ್ಕೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸೇಡಂ ಕ್ಷೇತ್ರಕ್ಕೆ ಈಗಾಗಲೆ 1000 ಮನೆ ಮಂಜೂರು ಮಾಡಿದಕ್ಕಾಗಿ ವಸತಿ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಅವರು ನನ್ನ ಕ್ಷೇತ್ರದಲ್ಲಿ ಸೂರಿಲ್ಲದವರು ಯಾರು ಇರಬಾರದೆಂಬ ಗುರಿ ಹೊಂದಿದ್ದು, ಪುರಸಭೆಯಿಂದ ಇನ್ನೂ 25 ಎಕರೆ ಜಮೀನು ಕೊಡತ್ತೀವಿ, ಇನ್ನೂ 2000 ಮನೆ ನಿರ್ಮಿಸಿಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!