Thursday, February 29, 2024

ಹೈಜಾಕ್ ಆಗಿದ್ದ ನೌಕೆಯನ್ನು ಭಾರತದ ನೌಕಾಸೇನೆ ರಕ್ಷಿಸಿದ್ದು ಹೇಗೆ? – ಇಲ್ಲಿವೆ ಹೆಮ್ಮೆ ಪಡಬೇಕಾದ ವಿವರಗಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಲೈಬೇರಿಯಕ್ಕೆ ಸೇರಿದ್ದ, 15 ಭಾರತೀಯರನ್ನು ಹೊಂದಿದ್ದ ವಾಣಿಜ್ಯ ನೌಕೆಯೊಂದನ್ನು ಅರಬ್ಬಿ ಸಮುದ್ರದಲ್ಲಿ ಅಪಹರಿಸುವ ಸಮುದ್ರಗಳ್ಳರ ಪ್ರಯತ್ನವನ್ನು ತನ್ನ ತ್ವರಿತ ಕಾರ್ಯಾಚರಣೆ ಮೂಲಕ ಭಾರತೀಯ ನೌಕೆಸೇನೆಯು ಹಿಮ್ಮೆಟ್ಟಿಸಿರುವ ವಿದ್ಯಮಾನವನ್ನು ನೀವು ಅದಾಗಲೇ ಓದಿರುತ್ತೀರಿ.
ಸಮುದ್ರಮಾರ್ಗದಲ್ಲಿ ತನ್ನ ಬಲ ಎಂಥದ್ದೆಂದು ಭಾರತವು ಜಗತ್ತಿಗೆ ಸಾರಿ ಹೇಳಿದಂತಿರುವ ಈ ವಿದ್ಯಮಾನದ ವಿವರಗಳೇನು?

ಗುರುವಾರ (ಡಿಸೆಂಬರ್ 4) ಸಂಜೆಯ ವೇಳೆಗೆ ಇಂಗ್ಲೆಂಡಿನ ರಾಯಲ್ ನೇವಿಯ ಭಾಗವಾದ ಸಮುದ್ರ ವ್ಯಾಪಾರ ನಿರ್ವಹಣಾ ಘಟಕವು ಅಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕೆಗಳಿಗೆಲ್ಲ ಸಂದೇಶ ರವಾನಿಸುತ್ತದೆ. ಎಂವಿ ಲಿಲಾ ನಾರ್ಫಾರ್ಕ್ ಎಂಬ ವಾಣಿಜ್ಯ ಹಡಗನ್ನು ವಶಪಡಿಸಿಕೊಳ್ಳುವುದಕ್ಕೆ ಐದಾರು ಶಸ್ತ್ರಧಾರಿಗಳು ಆ ಹಡಗಿನ ಮೇಲ್ಮೈ ಏರಿದ್ದಾರೆ ಎಂಬುದೇ ಆ ಸಂದೇಶ. ತಕ್ಷಣವೇ ಭಾರತದ ನೌಕಾಸೇನೆಯು ಮೊದಲಿಗೆ ಗೋವಾದಿಂದ ಪಿ-8ಐ ಎಂಬ ವಿಮಾನವನ್ನು ನಿಗಾಕ್ಕೆ ಕಳುಹಿಸಿತು. ಅದರ ಬೆನ್ನಲ್ಲೇ ಅರಬ್ಬೀ ಸಮುದ್ರದ ಉದ್ದಗಲದಲ್ಲಿ ಅತ್ತ ರೆಡ್ ಸಿಯ ಬಾಯಿಯಂತಿರುವ ಗಲ್ಫ್ ಆಫ್ ಅಡೆನ್ ವರೆಗೆ ಪಹರೆಯಲ್ಲಿರುವ ಐಎನ್ಎಸ್ ಚೆನ್ನೈ ಯುದ್ಧನೌಕೆಯನ್ನು ಘಟನೆ ವರದಿಯಾಗಿರುವ ಸ್ಥಳದತ್ತ ತಿರುಗಿಸಿತು.

ಶುಕ್ರವಾರ ಮುಂಜಾನೆ ವೇಳೆಗೆಲ್ಲ ಅಪಹರಣ ಪ್ರಯತ್ನಕ್ಕೆ ಒಳಗಾಗುತ್ತಿದ್ದ ನೌಕೆಯ ಬಳಿಸಾರಿ, ಅದರೊಳಗೆ ಇದ್ದ ಸಿಬ್ಬಂದಿ ಜತೆ ದೂರಸಂಪರ್ಕವನ್ನು ಸಾಧಿಸಿಬಿಟ್ಟಿತ್ತು ನೌಕಾಸೇನೆ ಕಳುಹಿಸಿದ್ದ ವಿಮಾನ. ಈ ಬಗೆಯ ಅಪಹರಣ ಪ್ರಯತ್ನಗಳು ನಡೆದಾಗ ಸಮುದ್ರಗಳ್ಳರು ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಳ್ಳುವುದನ್ನು ತಡೆಯುವುದಕ್ಕೆ ಒಂದು ಸುರಕ್ಷಿತ ಕೋಣೆ ನೌಕೆಗಳಲ್ಲಿರುತ್ತದೆ. ಸಿಬ್ಬಂದಿಯೆಲ್ಲ ಅದರೊಳಗೆ ಹೊಕ್ಕಿಬಿಟ್ಟಿದ್ದರಿಂದ ಆ ನೌಕೆಯ ಇತರ ಭಾಗಗಳು ಕಡಲ್ಗಳ್ಳರ ನಿಯಂತ್ರಣಕ್ಕೆ ಬಂದಿದ್ದರೂ ಮನುಷ್ಯರನ್ನು ಒತ್ತೆಯಾಳಾಗಿಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗಿರಲಿಲ್ಲ. ತನಗೆ ಸಿಕ್ಕ ಈ ಮಾಹಿತಿಯನ್ನು ನೌಕಾಸೇನೆಯ ವಿಮಾನವು ಭಾರತದ ಯುದ್ಧನೌಕೆಗೆ ತಲುಪಿಸಿತು. ಇನ್ನೂ ಬೆಳಕು ಹರಿಯದ 3.15 ಗಂಟೆಗೆಲ್ಲ ಅಪಹರಣ ಪ್ರಯತ್ನಕ್ಕೊಳಗಾದ ನೌಕೆಯ ಹತ್ತಿರ ಧಾವಿಸಿದ ಐಎನ್ಎಸ್ ಚೆನ್ನೈ ಒಂದು ಎಚ್ಚರಿಕೆ ಘೋಷಣೆಯನ್ನು ಮೊಳಗಿಸಿತು. “ಕಡಲ್ಗಳ್ಳರೇ, ಮರ್ಯಾದೆಯಿಂದ ನೌಕೆಯನ್ನು ತೊರೆದುಹೋಗಿ, ಇಲ್ಲವೇ ಪರಿಣಾಮ ಎದುರಿಸಿ” ಎಂಬುದೇ ಆ ಎಚ್ಚರಿಕೆ.

ಕ್ಷಿಪಣಿ ಸನ್ನದ್ಧ ಐಎನ್ಎಸ್ ಚೆನ್ನೈ ಯುದ್ಧನೌಕೆ ಎದುರುಹಾಕಿಕೊಳ್ಳುವುದು ತಮಾಷೆಯ ಮಾತಲ್ಲ. ಅದಾಗಲೇ ಕಡಲ್ಗಳ್ಳರು ನೌಕೆಯಿಂದಿಳಿದು ತಮ್ಮ ಬೋಟುಗಳಲ್ಲಿ ಪಲಾಯನ ಮಾಡಿದ್ದರು. ಇದನ್ನು ವೈಮಾನಿಕ ಸಮೀಕ್ಷೆ ಮೂಲಕ ಮತ್ತೆ ಖಾತ್ರಿ ಪಡಿಸಿಕೊಳ್ಳಲಾಯಿತು. ನಂತರ ಐಎನ್ಎಸ್ ಚೆನ್ನೈನಿಂದ ಗಾಳಿತುಂಬಿದ ಟ್ಯೂಬಿನ ಬೋಟುಗಳನ್ನು ಬಳಸಿಕೊಂಡು, ಸಮುದ್ರಯುದ್ಧದಲ್ಲಿ ಪರಿಣತರಾದ ಭಾರತೀಯ ಯೋಧರ ತಂಡ ‘ಮಾರ್ಕೋಸ್’, ಆಘಾತದಿಂದ ನಿಂತಿದ್ದ ವಾಣಿಜ್ಯ ನೌಕೆಯ ಮೇಲೆ ಹೋಗಿ ಸುರಕ್ಷತೆಯನ್ನು ಖಾತ್ರಿ ಪಡಿಸಿತು.

 ನಂತರ ಆ ನೌಕೆಯ ವಿದ್ಯುತ್ ಸಂಪರ್ಕಗಳನ್ನೆಲ್ಲ ಸರಿಪಡಿಸಿ ಅದು ಮುಂದಿನ ಪ್ರಯಾಣಕ್ಕೆ ಯೋಗ್ಯವಾಗುವಂತೆ ಮಾಡಿ, ಆತಂಕದಲ್ಲಿದ್ದ 21 ಸಿಬ್ಬಂದಿಯನ್ನು (ಈ ಪೈಕಿ 15 ಭಾರತೀಯರು) ಯುದ್ಧನೌಕೆಗೆ ದಾಟಿಸಲಾಯಿತು.

ಇಸ್ರೇಲಿನಲ್ಲಿ ಹಮಾಸ್ ವಿರುದ್ಧ ನಡೆಯುತ್ತಿರುವ ಸಂಘರ್ಷದಲ್ಲಿ ಉಗ್ರರನ್ನು ಬೆಂಬಲಿಸಿರುವ ಹಲವು ಗುಂಪುಗಳು ರೆಡ್ ಸಿ ಮಾರ್ಗದಲ್ಲಿ ನೌಕೆಗಳ ಮೂಲಕ ವ್ಯಾಪಾರವನ್ನು ಹದಗೆಡಿಸುತ್ತಿರುವುದು ಇತ್ತೀಚಿನ ವಿದ್ಯಮಾನ. ಲೈಬೇರಿಯ ನೌಕೆ ಹೈಜೌಕ್ ಮಾಡಲೆತ್ನಿಸಿದವರು ಸಾಮಾನ್ಯ ಕಡಲ್ಗಳ್ಳರೋ ಅಥವಾ ಉಗ್ರರೋ ಎಂಬುದು ಸ್ಪಷ್ಟವಾಗಿಲ್ಲವಾದರೂ, ಈ ಪ್ರದೇಶದಲ್ಲಿ ಮಿಂಚಿನ ರಕ್ಷಣಾ ಕಾರ್ಯಾಚರಣೆ ನಡೆಸುವ ತಾಕತ್ತು ಭಾರತಕ್ಕಿದೆ ಎಂಬುದನ್ನು ಈ ವಿದ್ಯಮಾನ ಸಾರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!