ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಕೋಮುಗಲಭೆ ಮತ್ತು ಘಟನೆಯ ನಂತರ ಗೃಹ ಸಚಿವರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದ ಹೇಳಿಕೆಗಳನ್ನು ಗಮನಿಸಿದರೆ ರಾಜ್ಯದಲ್ಲಿರುವುದು ಮೂಲಭೂತವಾದಿಗಳಿಗೆ ಬೆಂಬಲ ಕೊಡುವ ತಾಲಿಬಾನ್ ಸರ್ಕಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಈ ಸಂಬಧ ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಅಶೋಕ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಹಿಂದುಗಳನ್ನೇ ಗುರಿಯಾಗಿಸಿಕೊಂಡು, ಗಣೇಶ ವಿಸರ್ಜನೆಯ ಮೆರವಣಿಗೆಗೆ ಕಾದು, ಕಲ್ಲುಗಳ ರಾಶಿ, ಪೆಟ್ರೋಲ್ ಬಾಂಬು, ತಲ್ವಾರ್ ಗಳನ್ನ ಸಂಗ್ರಹಿಸಿಟ್ಟುಕೊಂಡು ಸಂಪೂರ್ಣ ಪೂರ್ವನಿಯೋಜಿತವಾಗಿ ಈ ದುಷ್ಕೃತ್ಯ ನಡೆದಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಆದರೆ ಇದೊಂದು ಆಕಸ್ಮಿಕ ಘಟನೆ, ಸಣ್ಣ ಘಟನೆ ಎಂದು ತಿಪ್ಪೆ ಸಾರಿಸುವ ಮಾತಾಡುತ್ತಿರುವ ಕಾಂಗ್ರೆಸ್ ಸರ್ಕಾರ, ಮುಸ್ಲಿಂ ಮತಾಂಧರನ್ನ ಓಲೈಕೆ ಮಾಡಲು, ಹಿಂದೂಗಳನ್ನು ಬಲಿಕೊಡಲೂ ಸಿದ್ಧ ಎಂದು ನಿರ್ಧಾರ ಮಾಡಿದಂತಿದೆ.ನಾಗಮಂಗಲದ ಘಟನೆಯಿಂದ ಹೀಗಾದರೆ ನಮ್ಮ ಗತಿ ಏನು ಎಂದು ಇಡೀ ಹಿಂದೂ ಸಮಾಜ ಆತಂಕಗೊಂಡಿದೆ. ರಾಜ್ಯದ ಹಿಂದೂಗಳ ಮನಸ್ಸಿನಲ್ಲಿ ಕಾಡುತ್ತಿರುವ ಈ ಪ್ರಶ್ನೆಗಳಿಗೆ ಕಾಂಗ್ರೆಸ್ ಸರ್ಕಾರ ಉತ್ತರ ಕೊಡಬೇಕು ಎಂದಿದ್ದಾರೆ.