ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಈವರೆಗೂ 1,81,699 ಪದವೀಧರರು ಯುವನಿಧಿ ಯೋಜನೆ ಅಡಿ ನೋಂದಣಿ ಮಾಡಿಕೊಂಡಿದ್ದು, ನೋಂದಣಿ ಮಾಡಿಕೊಂಡವರಲ್ಲಿ ಈವರೆವಿಗೂ 1,45,978 ಪದವೀಧರರಿಗೆ ನೇರ ನಗದು ವರ್ಗಾವಣೆ ಮೂಲಕ ನಿರುದ್ಯೋಗ ಭತ್ಯೆ ಪಾವತಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ನವೀನ್ ಅವರು ರಾಜ್ಯದಲ್ಲಿ ಕಳೆದ 2 ವರ್ಷಗಳಲ್ಲಿ 8 ಲಕ್ಷ ವಿದ್ಯಾರ್ಥಿಗಳು ಪದವಿ ಮುಗಿಸಿದ್ದಾರೆ. ಆದರೆ ಯುವನಿಧಿಗೆ ನೋಂದಣಿ ಆಗಿರೋದು ಕಡಿಮೆ ಆಗಿದೆ ಯಾಕೆ? ಯುವನಿಧಿಗೆ ಪ್ರತಿ ತಿಂಗಳು ಹಣ ಕೊಡ್ತಿದ್ದೀರಾ? ಎಷ್ಟು ಹಣ ಕೊಡ್ತಿದ್ದೀರಾ ಅಂತ ಪ್ರಶ್ನೆ ಮಾಡಿದರು.
ಇದಕ್ಕೆ ಸಚಿವ ಶರಣ ಪ್ರಕಾಶ್ ಪಾಟೀಲ್, ಈವರೆಗೆ 1,81,699 ಪದವೀಧರು ಯುವನಿಧಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಇವರ ಪೈಕಿ 1,45,978 ಪದವೀಧರಿಗೆ ಹಣ ಕೊಡಲಾಗಿದೆ ಎಂದು ಉತ್ತರಿಸಿದರು.
ನಮ್ಮ ಗ್ಯಾರಂಟಿಯಲ್ಲಿ 2023-24 ರ ಅವಧಿಯಲ್ಲಿ ವಿದ್ಯಾರ್ಥಿಗಳು ಪದವಿ ಮುಗಿಸಿರಬೇಕು. ಉದ್ಯೋಗ ಸಿಗದೇ 6 ತಿಂಗಳು ಆಗಿದ್ದವರಿಗೆ ಮಾತ್ರ ಈ ಯೋಜನೆ ಅನ್ವಯ ಅಗುತ್ತದೆ. ಯುವನಿಧಿಗೆ ಅವರೇ ಅರ್ಜಿ ಹಾಕಬೇಕು. ಅರ್ಜಿ ಹಾಕಿದವರಿಗೆ ಯುವನಿಧಿ ಕೊಡುತ್ತಿದ್ದೇವೆ ಎಂದರು.
1,81,669 ಪದವೀಧರ ಪೈಕಿ 1,45,978 ಪದವೀಧರಿಗೆ ಹಣ ಪಾವತಿ ಮಾಡಲಾಗಿದೆ. ಉಳಿದವರ ದಾಖಲೆ ಪರಿಶೀಲನೆ ಆಗಿಲ್ಲ. ಉಳಿದವರು ಉನ್ನತ ಶಿಕ್ಷಣಕ್ಕೆ ಹೋಗಿದ್ದಾರೆ. ಹೀಗಾಗಿ ಉಳಿದವರಿಗೆ ಹಣ ಹಾಕಿಲ್ಲ. ಪ್ರತಿ ತಿಂಗಳು ಯುವನಿಧಿ ಹಣ ಹೋಗುತ್ತಿದೆ ಎಂದು ತಿಳಿಸಿದರು.