-ರಾಚಪ್ಪಾ ಜಂಬಗಿ
ಕೃಷಿಯಲ್ಲಿ ವಾಡಿಕೆಯಂತೆ ಹನಿ ನೀರಾವರಿ ಪದ್ಧತಿ ಎಲ್ಲರಿಗೂ ಗೊತ್ತು. ಆದರೆ, ಬಹುಬೆಳೆಗಳನ್ನು ಬೆಳೆವ ಸಂದರ್ಭದಲ್ಲಿ ಸಾರಾಸಗಟಾಗಿ ಎಲ್ಲ ಬೆಳೆಗಳಿಗೂ ಒಂದೇ ಪ್ರಮಾಣದ ನೀರುಣಿಸಲಾಗದು. ಇದಕ್ಕೇನು ಪರಿಹಾರ? ಕಲಬುರಗಿ ತಾಲೂಕಿನ ಹಾಲ್ ಸುಲ್ತಾನಪುರ ಗ್ರಾಮದ ಕೃಷಿ ಪಂಡಿತ ಎಂದೇ ಖ್ಯಾತಿ ಪಡೆದ ರೈತ ಶರಣಬಸಪ್ಪ ಪಾಟೀಲ ಇದಕ್ಕೆ ನವೀನ ತಂತ್ರಜ್ಞಾನದ ಮೂಲಕ ಉತ್ತರ ಪಡೆದುಕೊಂಡಿದ್ದಾರೆ.
ತಮ್ಮ 3 ಎಕರೆ ತೋಟದಲ್ಲಿ ಬಹುವಾರ್ಷಿಕ ಬೆಳೆಗಳಿಗೆ ಗೃಹ ಬಳಕೆಯ ಪೈಪ್ಲೈನ್ ಮಾಡಿ ಕಡಿಮೆ ನೀರಿನಿಂದ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ. ಹನಿ ನೀರಾವರಿ ಪದ್ಧತಿ ಮಾದರಿಯೇ ಆಗಿದ್ದರೂ ಬಹುಕಾಲ ಬಾಳಿಕೆಯ ಗಿಡಗಳಿಗೆ ಅವಶ್ಯಕತೆ ತಕ್ಕಂತೆ ನೀರು ನೀಡುವ ತಾಂತ್ರಿಕತೆ ಅಳವಡಿಸಿಕೊಂಡಿದ್ದಾರೆ. ಸಣ್ಣ ಗಿಡವಾಗಲಿ ದೊಡ್ಡ ಗಿಡವಾಗಲಿ ಅದಕ್ಕೆ ತಕ್ಕಂತೆ ನೀರುಣಿಸುವ ಪದ್ಧತಿ ಈ ನಳ ನೀರಾವರಿ ಪದ್ಧತಿಯಲ್ಲಿದೆ.
ಗಿಡಗಳಿಗೆ ನೀರುಣಿಸಲು ಗೃಹ ಬಳಕೆಯ 75 ಮೀ.ಮೀ ಮುಖ್ಯ ಪೈಪ್ ಮತ್ತು 20 ಮೀ.ಮೀ ಉಪ ಪೈಪ್ಲೈನ್ ಅಳವಡಿಸಿದ್ದಾರೆ. ನೀರಿನ ಒತ್ತಡ ಹೆಚ್ಚಿಸಲು ವಾಲ್, ಆಯಾ ಗಿಡದ ಹತ್ತಿರ ನಳವನ್ನು ಆಯಾ ಗಿಡಕ್ಕೆ ತಕ್ಕಂತೆ ವೇಗವನ್ನು, ನೀರು ಪೂರೈಕೆಯಾಗುವ ಟ್ಯಾಂಕರ್ಗೆ ಟೈಮರ್ ಅಳವಡಿಸಲಾಗಿದೆ.
ನೀರಿನ ಟ್ಯಾಂಕರ್ ಗಿಡಗಳಿಗೆ ಲಭ್ಯವಾಗುವ ನೀರು ಸಂಗ್ರಹವಾದ ನಂತರ ನೀರು ಪೂರೈಕೆ ಸ್ಥಗಿತವಾಗುತ್ತದೆ. ನಂತರ ನಲ್ಲಿಗಳ ಮೂಲಕ ಗಿಡಗಳಿಗೆ ಲಭ್ಯಕ್ಕೆನುಸಾರವಾಗಿ ನೀರು ಗಿಡಗಳ ಬುಡದಲ್ಲಿ ಸೇರುತ್ತದೆ. ಇದರಿಂದ ಶೇಕಡಾ ಅರ್ಧಕ್ಕೆ ಅರ್ಧದಷ್ಟು ನೀರು ಉಳಿತಾಯವಾಗುತ್ತದೆ. ನಳ ಪದ್ಧತಿಗೆ ಹನಿ ನೀರಾವರಿಗಾಗಿ ತಗಲುವ ವೆಚ್ಚದಷ್ಟೇ ಅಂದರೆ ಎಕರೆಗೆ 25-30 ಸಾವಿರ ರೂ. ಆಗುತ್ತದೆ.
ಕೃಷಿ ಪಂಡಿತ ಪ್ರಶಸ್ತಿಗೆ ಭಾಜನ
ಹನಿ ನೀರಾವರಿ ಪದ್ಧತಿಗೆ ಪರ್ಯಾಯವಾಗಿ ಹೊಸ ನಳ ನೀರಾವರಿ ಪದ್ಧತಿ ಕಂಡು ಹಿಡಿದಿರುವ ರೈತ ಶರಣಬಸಪ್ಪ ಪಾಟೀಲ ಅವಿಷ್ಕಾರ ಗುರುತಿಸಿ, ರಾಜ್ಯ ಸರ್ಕಾರ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದೆ. ನಾನು ಮಾಡಿದ ಹೊಸ ಆವಿಷ್ಕಾರಗಳ ಬಗ್ಗೆ ಇತರ ರೈತರಿಗೂ ಮಾಹಿತಿ ನೀಡಲು ನಾನು ಸಿದ್ಧವಿದ್ದೇನೆ ಎಂದು ಹೊಸ ದಿಗಂತಕ್ಕೆ ಮಾಹಿತಿ ನೀಡಿದ್ದಾರೆ.
3 ಎಕರೆಯ ಜಮೀನಿನಲ್ಲಿ ಬಹುವಾರ್ಷಿಕ ಬೆಳೆಗಳಾದ 450 ನಿಂಬೆ ಗಿಡಗಳು, 25 ಮಾವಿನ ಗಿಡಗಳು ಹಾಗೂ 6 ತೆಂಗಿನ ಗಿಡಗಳಿಗೆ ನಳ ನೀರಾವರಿ ಪದ್ಧತಿ ಅಳವಡಿಸಿಕೊಂಡು ನೀರುಣಿಸಲಾಗುತ್ತದೆ.