ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿ ಡೆಡ್‌ಲೈನ್‌ ಹತ್ತಿರ: ಇನ್ನೂ ಆಸಕ್ತಿ ತೋರದ ವಾಹನ ಮಾಲಕರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 
 
ರಾಜ್ಯದಲ್ಲಿ ಹಳೆಯ ವಾಹನಗಳಿಗೆ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ನಂಬರ್‌ ಪ್ಲೇಟ್‌ – HSRP Number Plate) ಕಡ್ಡಾಯವಾಗಿ ಅಳವಡಿಸಲು ಇಲಾಖೆ ಆದೇಶನೀಡಿದ್ದು, ಇದೀಗ ಇದರ ಗಡುವು ಮುಗಿಯುತ್ತಾ ಬಂದ್ದಿದೆ.

ಅವಧಿಯನ್ನು ವಿಸ್ತರಣೆ ಮಾಡಲಾಗುತ್ತಾ ಬರುತ್ತಿದ್ದರೂ 2 ಕೋಟಿ ವಾಹನಗಳ ಪೈಕಿ ಈವರೆಗೆ ನೋಂದಣಿ ಮಾಡಿಸಿರುವುದು 35 ಲಕ್ಷ ಮಂದಿ ಮಾತ್ರ ಎಂಬ ವಿಚಾರ ಗೊತ್ತಾಗಿದೆ. ಹಾಗಾಗಿ ಮತ್ತೊಮ್ಮೆ ಅವಧಿ ವಿಸ್ತರಣೆ ಆಗಲಿದೆಯೇ? ಅಥವಾ ದಂಡಾಸ್ತ್ರಕ್ಕೆ ರಾಜ್ಯ ಸರ್ಕಾರ ಮುಂದಾಗಲಿದೆಯೇ ಎಂಬ ಬಗ್ಗೆ ಈ ತಿಂಗಳ ಕೊನೆಯಲ್ಲಿ ಗೊತ್ತಾಗಲಿದೆ.

ಫೆಬ್ರವರಿ 17ಕ್ಕೆ ಇದ್ದ ನೋಂದಣಿ ಗಡುವನ್ನು ರಾಜ್ಯ ಸರ್ಕಾರ ಈಗ ಮೇ 31ರವರೆಗೆ ವಿಸ್ತರಣೆ ಮಾಡಿ ಈಗಾಗಲೇ ಆದೇಶಿಸಿದೆ. ಸರಿಯಾಗಿ ಲೆಕ್ಕ ಹಾಕಿದರೆ ಇನ್ನು 17 ದಿನ ಮಾತ್ರ ಬಾಕಿ ಇದೆ. ಆದರೆ, ರಾಜ್ಯದ ವಾಹನ ಸವಾರರು ಈ ಬಗ್ಗೆ ತಲೆಬಿಸಿಯನ್ನೇ ಮಾಡಿಕೊಂಡಂತೆ ಇಲ್ಲ. ಗಡುವು ವಿಸ್ತರಣೆಯಾದರೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಸಲ ಗಡುವು ವಿಸ್ತರಣೆಯಾಗಿದ್ದಾಗ ಕೊನೇ ಹಂತದಲ್ಲಿ 18 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದರು. ಈಗ ಅದರ ಪ್ರಮಾಣ 35 ಲಕ್ಷಕ್ಕೇರಿದೆ. ಆದರೆ, ನೋಂದಾಯಿತ ವಾಹನಗಳು ಬರೋಬ್ಬರಿ 2 ಕೋಟಿಗೂ ಅಧಿಕ ಇದೆ. ಹೀಗಾಗಿ ಈ ಬಾರಿ ರಾಜ್ಯ ಸರ್ಕಾರ ಯಾವ ಕ್ರಮವನ್ನು ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮಾರ್ಚ್‌ನಲ್ಲಿ ನಡೆದಿದ್ದ ವಿಧಾನ ಮಂಡಲ ಅಧಿವೇಶನದಲ್ಲಿ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿ ವಿಚಾರ ಚರ್ಚೆಗೆ ಬಂದಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿ, ಇನ್ನೂ 18 ಲಕ್ಷ ವಾಹನ ಸವಾರರು ನೋಂದಣಿ ಮಾಡಿಸಿಕೊಂಡಿದ್ದರಿಂದ ಗಡುವನ್ನು ವಿಸ್ತರಣೆ ಮಾಡುತ್ತಿರುವುದಾಗಿ ಹೇಳಿದ್ದರು. ಇದರಂತೆ ಈಗ ಮೇ 31ರವರೆಗೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಅಧಿಸೂಚನೆ ಹೊರಡಿಸಿದ್ದ ಸರ್ಕಾರ
2019ರ ಏಪ್ರಿಲ್‌ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಎಲ್ಲ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು (High Security Registration Plate-ಎಚ್‌ಎಸ್‌ಆರ್‌ಪಿ) ಕಡ್ಡಾಯವಾಗಿ ಅಳವಡಿಸಬೇಕು ಎಂದು ಆಗಸ್ಟ್‌ 17ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದೇ ರೀತಿ ಆ.18ರಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಹೀಗಾಗಿ ಎಲ್ಲ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!