ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ಮುಂದೆ ವಿಧಾನಸೌಧ ಹಾಗೂ ವಿಕಾಸಸೌಧ ಸೋಲಾರ್ ಬೆಳಕಲ್ಲಿ ಹೊಳೆಯಲಿದೆ.
ಹೌದು, ವಿಧಾನಸೌಧ ಹಾಗೂ ವಿಕಾಸಸೌಧದ ಆವರಣದಲ್ಲಿ ಸೌರ ವಿದ್ಯುತ್ ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ. ಸ್ವಚ್ಛ ಹಾಗೂ ನವೀಕರಿಸಬಹುದಾದ ಇಂಧನ ಬಳಕೆಗೆ ಉತ್ತೇಜನ ನೀಡಲು ಈ ಕ್ರಮವನ್ನು ಅಳವಡಿಸಲಾಗಿದೆ.
ಇತರ ಸರ್ಕಾರಿ ಕಟ್ಟಡಗಳಲ್ಲಿಯೂ ಮುಂದಿನ ದಿನದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಕೆಯಾಗುವ ಸಾಧ್ಯತೆ ಇದೆ. ವಿಧಾನಸೌಧವು ಐತಿಹಾಸಿಕ ಕಟ್ಟಡವಾಗಿದ್ದು, ಮೇಲ್ಚಾವಣಿಯಲ್ಲಿ ಸ್ಥಳಾಭಾವ ಇರುವ ಕಾರಣ ಮೇಲ್ಚಾವಣಿಯಲ್ಲಿ ಪ್ಯಾನೆಲ್ ಅಳವಡಿಸುವುದಕ್ಕೆ ಅವಕಾಶ ಇಲ್ಲ. ಹೀಗಾಗಿ ಕಟ್ಟಡದ ಆವರಣದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ಸೌರ ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.
ಸುಸ್ಥಿರ ಇಂಧನಕ್ಕಾಗಿ ದೀರ್ಘಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ SELCO ಫೌಂಡೇಶನ್‌ನೊಂದಿಗೆ ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಅಡಿಯಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.
ಪ್ರಸ್ತುತ ಸಂಸ್ಥೆಯು ವಿಧಾನಸೌಧ ಮತ್ತು ವಿಕಾಸಸೌಧ ಆವರಣದ ವಿವಿಧ ಸ್ಥಳಗಳಲ್ಲಿ ಪಾರಂಪರಿಕ ರಚನೆಗೆ ಧಕ್ಕೆಯಾಗದಂತೆ ಸೌರ ಫಲಕಗಳನ್ನು ಸ್ಥಾಪಿಸುತ್ತಿದ್ದಾರೆ. ಇದರಿಂದ ಸುಮಾರು 300 ಕಿಲೋವಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದ್ದು, ಕಟ್ಟಡದ ಒಟ್ಟು ವಿದ್ಯುತ್ ಅವಶ್ಯಕತೆಯ ಪೈಕಿ ಶೇ.12ರಷ್ಟು ಮಾತ್ರ ಇದು ಪೂರೈಸಲಿದೆ.
ವಿಧಾನಸೌಧ ಮತ್ತು ವಿಕಾಸಸೌಧಗಳಲ್ಲಿ ಸುಮಾರು 1,000ಕ್ಕೂ ಹೆಚ್ಚು ಕೊಠಡಿಗಳು ಇದ್ದು, ತಿಂಗಳಿಗೆ ರೂ.12 ಲಕ್ಷದಿಂದ ರೂ.15 ಲಕ್ಷದವರೆಗೆ ವಿದ್ಯುತ್ ಬಿಲ್ ಬರುತ್ತಿದೆ. 300 ಕಿಲೋವಾಟ್ ಸೌರ ವ್ಯವಸ್ಥೆಯಿಂದ ವಾರ್ಷಿಕ ಸುಮಾರು ರೂ.20 ಲಕ್ಷ ಉಳಿತಾಯ ಸಾಧ್ಯವಾಗಲಿದೆ.



