ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೃಹತ್ ಮರದ ಕೊಂಬೆಯೊಂದು ಧರೆಗುರುಳಿದ್ದು, ನಾಲ್ವರು ಕ್ಷಣಾರ್ಧದಲ್ಲಿ ಪಾರಾಗಿರುವ ಘಟನೆ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿಯ ಪ್ಯಾಲೇಸ್ ರೋಡ್‌ನ ಅಂಡರ್‌ಪಾಸ್ ಬಳಿ ನಡೆದಿದೆ.
ನಿನ್ನೆ (ಡಿ.06) ರಾತ್ರಿ 11:20ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರದ ಕೊಂಬೆಯೊಂದು ಬಿದ್ದಿದೆ. ಕಾರು ಸಂಪೂರ್ಣ ಜಖಂ ಆಗಿದ್ದು, ಚಾಲಕ ಕಾರ್ತಿಕ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಗು ಸೇರಿದಂತೆ ನಾಲ್ವರು ಕಾರಿನಲ್ಲಿ ಆರ್.ಟಿ ನಗರ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಪ್ಯಾಲೇಸ್ ರೋಡ್‌ನ ಅಂಡರ್‌ಪಾಸ್ ಬಳಿ ಮರದ ಕೊಂಬೆ ಕಾರಿನ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಂಡರ್‌ಪಾಸ್‌ನ ತಡೆಗೋಡೆಯಿಂದಾಗಿ ನಾಲ್ವರ ಜೀವ ಉಳಿದಿದೆ.
ಕಾರು ರೋಡಿನ ಮಧ್ಯ ಭಾಗದಲ್ಲಿದ್ದ ಕಾರಣ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿತ್ತು. ಬಳಿಕ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಬಂದು ಟ್ರಾಫಿಕ್ ಕ್ಲಿಯರ್ ಮಾಡಿದರು. ತಡರಾತ್ರಿ 1 ಗಂಟೆ ಸುಮಾರಿಗೆ ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆ