ಸರ್ಕಾರಿ ಕಚೇರಿಯಲ್ಲಿ ಭಾರೀ ಅಗ್ನಿ ಅವಘಡ: ಫೀಲ್ಡಿಗಿಳಿದ ಭಾರತೀಯ ವಾಯುಪಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿನ ಸಾತ್ಪುರ ಕಟ್ಟಡದಲ್ಲಿ ಸೋಮವಾರ ಸಂಜೆ 4 ಗಂಟೆಗೆ ಅಗ್ನಿ ಅವಘಡ ಸಂಭವಿಸಿದೆ. ಮೂರನೇ ಮಹಡಿಯಿಂದ ಹೊತ್ತಿಕೊಂಡ ಬೆಂಕಿ ಆರನೇ ಮಹಡಿಗೆ ವೇಗವಾಗಿ ವ್ಯಾಪಿಸಿದ್ದು, ಅಷ್ಟರಲ್ಲೇ ಇಡೀ ಕಟ್ಟಡ ಬೆಂಕಿಗೆ ಆಹುತಿಯಾಯಿತು. ಈ ಸರ್ಕಾರಿ ಕಟ್ಟಡವು ಸಿಬಿಐ, ಇಒಡಬ್ಲ್ಯೂ, ಬುಡಕಟ್ಟು ಕಲ್ಯಾಣ, ಆರೋಗ್ಯ ಇಲಾಖೆ ಮತ್ತು ಸಾರಿಗೆ ಇಲಾಖೆ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳನ್ನು ಹೊಂದಿದೆ. ತಡರಾತ್ರಿಯವರೆಗೂ ಬೆಂಕಿ ನಂದಿಸುವ ಪ್ರಯತ್ನ ನಡೆದಿದೆ. ಬೆಂಕಿ ಹತೋಟಿಗೆ ತರಲು ಸಾಧ್ಯವಾಗದ ಕಾರಣ ಸೇನಾ ಪಡೆ ಫೀಲ್ಡಿಗಿಳಿದದೆ. ಮಂಗಳವಾರ ಬೆಳಗಿನ ಜಾವದವರೆಗೂ ಶ್ರಮಿಸಿದ್ದಕ್ಕೆ ಬೆಂಕಿ ಹತೋಟಿಗೆ ಬಂದಿದೆ. ಈ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಡದಲ್ಲಿ ಬೆಂಕಿಯ ತೀವ್ರತೆ ಗಂಟೆಗಟ್ಟಲೆ ಹೆಚ್ಚುತ್ತಿದ್ದಂತೆ ಸೋಮವಾರ ತಡರಾತ್ರಿಯಾದರೂ ಬೆಂಕಿ ಹತೋಟಿಗೆ ಬರಲಿಲ್ಲ. ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪರಿಸ್ಥಿತಿಯನ್ನು ವಿವರಿಸಿದರು. ಸಹಾಯ ಬೇಕು ಎಂದು ಸಿಎಂ ಟ್ವಿಟರ್ ಮೂಲಕ ತಿಳಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಪರಿಸ್ಥಿತಿಯನ್ನು ಚರ್ಚಿಸಿದ ನಂತರ ವಾಯುಪಡೆಯ ನೆರವು ಕೋರಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ರಕ್ಷಣಾ ಸಚಿವರ ಆದೇಶದಂತೆ ಬೆಂಕಿಯನ್ನು ನಿಯಂತ್ರಿಸಲು ಎಎನ್-32 ವಿಮಾನ ಮತ್ತು ಎಂಐ-15 ಹೆಲಿಕಾಪ್ಟರ್ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಹೇಳಿದ್ದಾರೆ. ಬೆಂಕಿ ಅವಘಡದ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಆರಂಭದಲ್ಲಿ 30ರಿಂದ 40 ನೀರಿನ ಟ್ಯಾಂಕರ್‌ಗಳನ್ನು ತರಿಸಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ನಂತರ ರಾತ್ರಿ ಅಗ್ನಿಶಾಮಕ ದಳ ಮತ್ತು ವಾಯುಸೇನೆ ಜಂಟಿಯಾಗಿ ಬೆಂಕಿ ನಂದಿಸಲು ಪ್ರಯತ್ನಿಸಿದವು. ಮಂಗಳವಾರ ಬೆಳಗಿನ ಜಾವದ ಬಳಿಕ ಬೆಂಕಿ ಹತೋಟಿಗೆ ಬಂದಿದೆ.

ಈ ಕಟ್ಟಡದಲ್ಲಿ ಸಂಭವಿಸಿದ ಬೆಂಕಿಯನ್ನು ನಿಯಂತ್ರಿಸಲು ಅವರು 14 ಗಂಟೆಗಳ ಕಾಲ ಶ್ರಮಿಸಿದರು. ಈ ಬೆಂಕಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಸರ್ಕಾರಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ಸುಟ್ಟು ಕರಕಲಾಗಿವೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಸಾತ್ಪುರ ಭವನದಲ್ಲಿ ಬೆಂಕಿಗೆ ಮೂಲ ಕಾರಣವನ್ನು ಕಂಡುಹಿಡಿಯಲು ಸಮಿತಿಯನ್ನು ಘೋಷಿಸಿದ್ದಾರೆ. ಈ ಸಮಿತಿಯ ಸದಸ್ಯರು ವಿಚಾರಣೆ ನಡೆಸಿ ಸಿಎಂಗೆ ಪ್ರಾಥಮಿಕ ವರದಿ ಸಲ್ಲಿಸಲಿದ್ದಾರೆ.

ಇನ್ನು ಕೆಲವೇ ತಿಂಗಳಲ್ಲಿ ಮಧ್ಯಪ್ರದೇಶ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಸರ್ಕಾರಿ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿರುವುದನ್ನು ಕಾಂಗ್ರೆಸ್ ಮುಖಂಡರು ತೀವ್ರವಾಗಿ ಟೀಕಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಸಾಕ್ಷ್ಯ ನಾಶಪಡಿಸಲು ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ಅಜಯ್ ಸಿಂಗ್, ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ನಾಯಕರ ಆರೋಪಕ್ಕೆ ಬಿಜೆಪಿ ನಾಯಕರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಆರೋಪ ಸಂಪೂರ್ಣ ನಿರಾಧಾರ ಎಂದು ಬಿಜೆಪಿ ವಕ್ತಾರ ಹಿತೇಶ್ ಬಾಜ್ ಪೈ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!