ಹೊಸದಿಗಂತ ವರದಿ, ವಿಜಯಪುರ:
ಚಲಿಸುತ್ತಿದ್ದ ಆಟೋ ಮೇಲೆ ಬೃಹತ್ ಮರ ಉರುಳಿ ಬಿದ್ದು, ಮಹಿಳೆಯೊಬ್ಬಳು ಸಾವಿಗೀಡಾಗಿರುವ ಘಟನೆ ನಗರದ ಪೊಲೀಸ್ ತರಬೇತಿ ಕೇಂದ್ರದ ಬಳಿಯ ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ಮೃತಪಟ್ಟವಳನ್ನು ನಗರದ ಸಿದ್ದಾರೂಢ ಕಾಲೋನಿಯ ನಿವಾಸಿ ಯಲ್ಲಮ್ಮ ಕೊಂಡಗೂಳಿ (45) ಎಂದು ಗುರುತಿಸಲಾಗಿದೆ.
ಯಲ್ಲಮ್ಮ ಕೊಂಡಗೂಳಿ ಸೇರಿದಂತೆ ಐದು ಜನ ಮಹಿಳೆಯರು, ನಗರದಲ್ಲಿನ ಸಂಬಂಧಿಕರೊಬ್ಬರ ಮನೆಯಲ್ಲಿನ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಈ ಸಂದರ್ಭ ಯಲ್ಲಮ್ಮ ಕೊಂಡಗೂಳಿಗೆ ತೀವ್ರ ಪೆಟ್ಟಾಗಿದ್ದು, ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಅಸುನೀಗಿದ್ದಾರೆ.
ಇನ್ನುಳಿದ ಇಂದುತಾಯಿ ಕುಲಕರ್ಣಿ, ಚಂದ್ರಕಲಾ ವಾಲೀಕಾರ, ಮಂದಾಕಿನಿ ಬಡಿಗೇರ, ಸುವರ್ಣಾ ಮಜ್ಜಿಗಿ ಹಾಗೂ ಅಟೋ ಚಾಲಕ ಸಚಿನ್ ರಾಠೋಡ್ ಗೆ ಸಣ್ಣ, ಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಮರ ತೆರವುಗೊಳಿಸಿದ್ದಾರೆ.
ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.